ಹುಟ್ಟಿದ ಒಂದೇ ದಿನಕ್ಕೆ ನವಜಾತ ಶಿಶು ಮಾರಾಟ ಆರೋಪ- ತಾಯಿ ಸೇರಿ ಐವರ ಬಂಧನ…

63
firstsuddi

ಹಾಸನ: ಹುಟ್ಟಿದ ಒಂದೇ ದಿನಕ್ಕೆ ನವಜಾತ ಶಿಶುವನ್ನು ಮಾರಾಟ ಮಾಡಲಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಪ್ರಕರಣ ಸಂಬಂಧ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಕೊಂಡ ಮಹಿಳೆ ಉಷಾ ಹಾಗು ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗು ಸುಬ್ರಹ್ಮಣ್ಯ ಎಂಬುವವರನ್ನು ಬಂಧಿಸಲಾಗಿದೆ.

2023ರ ನವೆಂಬರ್ 15ರಂದು ಸಕಲೇಶಪುರ ತಾಲ್ಲೂಕಿನ ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಗಿರಿಜಾ ಜನ್ಮ ನೀಡಿದ್ದರು. ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂದು ನವೆಂಬರ್ 16ರಂದು ಚಿಕ್ಕಮಗಳೂರು ಮೂಲದ ಉಷಾ ಎಂಬ ಮಹಿಳೆಗೆ ಮಗು ಹಸ್ತಾಂತರ ಮಾಡಲಾಗಿತ್ತು. ಮಗು ಮಾರಾಟದ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪ್ರಕರಣವನ್ನ ಬಯಲಿಗೆಳಿದಿದ್ದಾರೆ.

ಕಾನೂನು ಉಲ್ಲಂಘನೆಗೆ ಆಶಾ ಕಾರ್ಯಕರ್ತೆ ಬೆಂಬಲ ನೀಡಿರೋದು ಗೊತ್ತಾಗಿದೆ. ಮಾಹಿತಿ ಸಂಗ್ರಹಿಸಿ ಮಕ್ಕಳ ಅಧಿಕಾರಿ ಕಾಂತರಾಜ್​ರಿಂದ ದೂರು ದಾಖಲಾಗಿದೆ. ಜನವರಿ 2ರಂದು ಅಧಿಕೃತ ಮಾಹಿತಿ ಅಧರಿಸಿ ಎಲ್ಲರ ಮೇಲೆ ಕೇಸ್ ಹಾಕಲಾಗಿದೆ.

ಪ್ರಕರಣ ಸಂಬಂಧ ವಿಚಾರಣೆ ಮುಂದುವರಿದಿದ್ದು, ಸದ್ಯ ಮಗುವಿಗೆ ಹಾಸನದ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗಿದೆ. ಈ ಕುರಿತು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.