ಹೃದಯ ಸಂಬಂದಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಶಿಬಿರ ಹೆಚ್ಚಿಸಿ : ಕೆ.ಎನ್.ರಮೇಶ್.

123
firstsuddi

ಚಿಕ್ಕಮಗಳೂರು: ಹೃದಯ ಸಂಬಂದಿ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಶಿಬಿರಗಳನ್ನು ಹೆಚ್ಚು ನಡೆಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಲಹೆ ನೀಡಿದರು.

ನಗರದ ಆಶ್ರಯ ನರ್ಸಿಂಗ್ ಹೋಮ್ ಆವರಣದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಇಂದು ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೃದಯ ಸಂಬಂದಿ ರೋಗಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಬಹಳಷ್ಟು ಸಂಖ್ಯೆಯಲ್ಲಿ ಹೃದಯಾಘಾತಗಳು ಸಂಭವಿಸುತ್ತಿರುವುದಕ್ಕೆ ಮೂಲ ಕಾರಣ ರೋಗದ ಬಗ್ಗೆ ಜನಗಳಲ್ಲಿರುವ ತಿಳುವಳಿಕೆಯ ಕೊರತೆ ಎಂದರು.

ಸಕಾರಾತ್ಮಕ ಚಿಂತನೆಗಳು ನಮ್ಮ ಆರೋಗ್ಯಕ್ಕೆ ಪೂರಕವಾಗಿರುತ್ತವೆ ಎಂದ ಅವರು, ಉತ್ತಮ ಆರೋಗ್ಯಕ್ಕಾಗಿ ನಾವು ಉತ್ತಮ ಆಹಾರ ಸೇವಿಸಬೇಕು. ಉತ್ತಮವಾದ ಚಿಂತನೆ ಮಾಡಬೇಕು. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಒತ್ತಡದ ಬದುಕಿನಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹೃದಯ ರೋಗಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ವರ್ಷಕ್ಕೊಮ್ಮೆ ಯಾದರೂ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವ ಮೂಲಕ ಬಹುತೇಕ ರೋಗಗಳನ್ನು ಬಾರದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.

ಆಸ್ಪತ್ರೆಯ ಹೃದಯ ತಜ್ಞ ಡಾ|ಅನಿಕೇತ್ ವಿಜಯ್ ಮಾತನಾಡಿ, ಹೃದಯ ರೋಗಗಳನ್ನು ತಡೆಗಟ್ಟುವ ಬಗ್ಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು.

ಇದೇ ವೇಳೆ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಒಳರೋಗಿಗಳ ವಿಭಾಗವನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಉದ್ಘಾಟಿಸಿದರು.

ಆಸ್ಪತ್ರೆಯ ಅಧ್ಯಕ್ಷ ಡಾ|ಡಿ.ಎಲ್.ವಿಜಯ್‍ಕುಮಾರ್, ನಿರ್ದೇಶಕಿ ಡಾ|ಶುಭಾ ವಿಜಯ್, ಡಾ|ಅಶ್ವಿನಿ ಅನಿಕೇತ್, ಡಾ| ಕಾರ್ತಿಕ್ ವಿಜಯ್, ಡಾ|ಭಾಗ್ಯ ಕಾರ್ತಿಕ್, ಐಎಂಎ ಅಧ್ಯಕ್ಷ ಡಾ|ಸ್ವಾಮಿ, ಜಿಲ್ಲಾ ಸರ್ಜನ್ ಡಾ|ಮೋಹನ್‍ಕುಮಾರ್, ಡಾ|ಅಶ್ವತ್ ಬಾಬು, ನೀತಾ ಶರೋನ್ ಉಪಸ್ಥಿತರಿದ್ದರು.