ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನ ಆಸೆ ಪೂರೈಸಿದ ಶಿವಮೊಗ್ಗ ಪೊಲೀಸರು…

73
firstsuddi

ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಂಟೂವರೆ ವರ್ಷದ ಬಾಲಕನ ಪೊಲೀಸ್ ಆಗುವ ಆಸೆಯನ್ನು ಶಿವಮೊಗ್ಗದ ಪೊಲೀಸರು ಪೂರೈಸಿದ್ದಾರೆ.

ಶಿವಮೊಗ್ಗ ಹೊರವಲಯದ ಸೂಳೇ ಬೈಲು ಬಡಾವಣೆಯ ಬಾಲಕ ಆಜಾನ್ ಖಾನ್ ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿದ. ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಬಳಲುತ್ತಿದ್ದ ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇತ್ತು. ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಅವರು ಆಜಾನ್ ಖಾನ್ ನನ್ನು ಒಂದು ಗಂಟೆ ಮಟ್ಟಿಗೆ ಇನ್ಸ್‌ಪೆಕ್ಟರ್‌ ಮಾಡಿದ್ದರು.

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿ ಬಂದ ಬಾಲಕ ಆಜಾನ್ ಖಾನ್ ನಿಗೆ ಎಸ್ ಪಿ ಮಿಥುನ್ ಕುಮಾರ್ ಖುದ್ದು ಹಾಜರಿದ್ದು ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿ ಕೊಡಲಾಯಿತು. ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿ ಠಾಣೆಗೆ ಬಂದ ಬಾಲಕ ಆಜಾನ್ ಖಾನ್ ಮೊದಲು ಎಸ್‌ಪಿ ಯವರಿಗೆ ಸೆಲ್ಯೂಟ್ ಮಾಡಿದ. ನಂತರ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಆಗಿ ಪೊಲೀಸ್ ಅಧಿಕಾರಿಯ ಚೇರ್ ನಲ್ಲಿ ಕುಳಿತು ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಬ್ರೀಫಿಂಗ್ ಮಾಡಿ ಅವರ ಕರ್ತವ್ಯ ತಿಳಿಸಿದ. ಸಿಬ್ಬಂದಿಗೆ ರಜೆಯನ್ನು ಮಂಜೂರು ಮಾಡಿ, ಕಳ್ಳನಿಗೆ ಬುದ್ಧಿ ಹೇಳಿದ.

ಒಂದು ಗಂಟೆ ಕಾಲ ಆಜಾನ್ ಖಾನ್ ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿಭಾಯಿಸಿದ ಮಗನ ಆಸೆಯನ್ನು ಈಡೇರಿಸಿದ ಖುಷಿ ತಂದೆ ತಬ್ರೇಜ್ ಖಾನ್ ಹಾಗೂ ತಾಯಿ ನಗ್ಮಾ ಖಾನ್ ಗಾಗಿತ್ತು. ನನ್ನ ಮಗನಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆ ಇದೆ. ಎಷ್ಟೋ ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇಂತಹ ಕಾಯಿಲೆ ಬರಲಿದೆಯಂತೆ. ಆತನ ಹೃದಯ ಬೆಳೆದಿಲ್ಲ. ವೈದ್ಯರು, ತಜ್ಞರ ಬಳಿ ತೋರಿಸಿದಾಗ ಶಸ್ತ್ರಚಿಕಿತ್ಸೆ ಮಾಡಲು ಆಗುವುದಿಲ್ಲ. ಹೃದಯ ಮತ್ತು ಶಾಸ್ವಕೋಶದ ಕಸಿ ಮಾಡಬೇಕು ಎಂದಿದ್ದಾರೆ. ಆತನಿಗೆ ಪೊಲೀಸ್ ಆಗಬೇಕು ಅನ್ನುವ ಆಸೆಯನ್ನು ಪೂರೈಸಿದ್ದೇನೆ ಎಂದರು.

ಈಗಾಗಲೇ ಚಿತ್ರನಟ ಕಿಚ್ಚ ಸುದೀಪ್ ಹಾಗೂ ರಿಷಬ್ ಶೆಟ್ಟಿಯರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದ ಮಗನಿಗೆ ನಟರನ್ನು ಭೇಟಿ ಮಾಡಿಸಿ ಆಸೆ ಈಡೇರಿಸಿದ್ದರು. ಇದೀಗ ಪೊಲೀಸ್ ಆಫೀಸರ್ ಆಗುವ ಆಸೆಯನ್ನು ಪೋಷಕರು ಶಿವಮೊಗ್ಗ ಎಸ್‌ಪಿ ನೆರವಿನೊಂದಿಗೆ ಈಡೇರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಎಸ್‌ಪಿ ಜಿಕೆ ಮಿಥುನ್ ಕುಮಾರ್, ಒಂದು ದಿನ ಪೊಲೀಸ್ ಆಗಬೇಕು ಎಂದು ಬಾಲಕನಿಗೆ ಆಸೆ ಇತ್ತು. ಈ ಕುರಿತು ಅವರ ತಂದೆ ಮನವಿ ಮಾಡಿದ್ದರು. ಈ ಹಿನ್ನೆಲೆ ಡಿವೈಎಸ್‌ಪಿ ಅವರಿಗೆ ತಿಳಿಸಿ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಮಾಡಲಾಗಿದೆ. ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್‌ಪೆಕ್ಟರ್‌ ಮಾಡಿದ್ದೇವೆ. ಬಾಲಕ ತುಂಬ ಖುಷಿ ಪಟ್ಟಿದ್ದಾನೆ ಎಂದರು.