ಹೆಚ್‍ಡಿಕೆ ಹಸಿ ಸುಳ್ಳು ಹೇಳುವ ಮೂಲಕ ಹತಾಶ ಸ್ಥಿತಿಗೆ ತಲುಪಿದ್ದಾರೆ : ಆರಗ ಜ್ಞಾನೇಂದ್ರ.

44
firstsuddi

ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿ ಹಸಿ ಸುಳ್ಳು ಹೇಳುವುದರ ಮೂಲಕ ಹತಾಶ ಸ್ಥಿತಿಗೆ ತಲುಪಿದ್ದಾರೆ. ಕುಮಾರಸ್ವಾಮಿ ನನ್ನ ಮೇಲೆ ಮಾಡಿದ ಆರೋಪ ಸಾಬೀತುಪಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಸ್ಯಾಂಟ್ರೋ ರವಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಹಣ ಎಣಿಸುತ್ತಿರುವ ಫೋಟೋ ವೈರಲ್ ಆಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು, ಅತ್ಯಂತ ಬೇಜವಾಬ್ದಾರಿಯಿಂದ ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಹೇಳುವುದರ ಮೂಲಕ ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ. ಕುಮಾರಸ್ವಾಮಿಯವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತು ಪಡಿಸಬೇಕು ಎಂದರು.

ಈಗಾಗಲೇ ಡಿಜಿ-ಐಜಿ, ಮೈಸೂರು ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಸ್ಯಾಂಟ್ರೋ ಯಾರು ಏನು ಅಂತ ಆತನನ್ನ ಕರೆದುಕೊಂಡು ವಿಚಾರಣೆ ಮಾಡಲು ಹಾಗೂ ಅವನ ಮೇಲೆ ಎಷ್ಟು ಕೇಸ್ ಇದೆ. ಆತನ ಹಿನ್ನೆಲೆ ಬಗ್ಗೆ ಪರಿಶೀಲನೆಗೆ ಸೂಚನೆ ನೀಡಿದ್ದೇನೆ. ಸಿಎಂ ಅವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡೋದು ಬೇಡ. ಅನೇಕರು ನಮ್ಮ ಮನೆಗೆ ಬಂದು ಫೋಟೋ ತೆಗೆಸಿಕೊಂಡಿರುತ್ತಾರೆ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಸಾವಿರಾರು ಜನ ಅವರ ಜೊತೆ ಫೋಟೋ ತೆಗೆದುಕೊಂಡು ಇರುತ್ತಾರೆ. ನಾವು ಕುಮಾರಸ್ವಾಮಿ ಫೋಟೋ ಇಟ್ಟುಕೊಂಡು ಆರೋಪ ಮಾಡಿಲ್ಲ. ಕುಮಾರಸ್ವಾಮಿ ನನ್ನ ಜೊತೆ ಇರೋ ಫೋಟೋ ಇಟ್ಟುಕೊಂಡು ನನ್ನ ತೇಜೋವಧೆ ಮಾಡೋದು ಸರಿಯಲ್ಲ. ಇದರಿಂದ ಕುಮಾರಸ್ವಾಮಿ ಏನು ಲಾಭ ನನಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.