ಚಿಕ್ಕೋಡಿ: ಅನೈತಿಕ ಸಂಬಂಧದಿಂದ ಹೆತ್ತ ಮಗನನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಮಹಿಳೆಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 7 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ್ ಕರಿಗಾರಗೆ (31) ಶಿಕ್ಷೆಗೊಳಗಾದವಳು. ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರ ಅಕ್ಟೋಬರ್ 22ರಂದು ನಡೆದ ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್ಎಲ್ ಚೌಹಾಣ್ ಅವರು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವೈಜಿ ತುಂಗಳ ವಾದ ಮಂಡಿಸಿದರು.
ಘಟನೆಯ ವಿವರ:
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ್ ಕರಿಗಾರ, ರಾಮಪ್ಪ ಕೆಂಚಪ್ಪ ಬಸ್ತವಾಡ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆಯ ಹಿರಿಯ ಮಗ ಪ್ರವೀಣ್‌ಗೆ (10) ಈ ವಿಚಾರ ಗೊತ್ತಾಗಿ, ತಂದೆಗೆ ಹೇಳುತ್ತೇನೆ ಎಂದು ಓಡಿ ಹೋದಾಗ ಆತನನ್ನು ಕರೆದು 50 ರೂ. ಕೊಟ್ಟು ಅಂಗಡಿಯಿಂದ ತಿಂಡಿ ತರಲು ಹೇಳಿ ಕಳುಹಿಸಿದ್ದಳು.
ಆತನ ಜೊತೆ ಕಿರಿಯ ಮಗ ಪ್ರಜ್ವಲ್‌ನನ್ನೂ (8) ಕಳುಹಿಸಿದ್ದು, ಬಳಿಕ ಆಕೆ ಅವರ ಹಿಂದೆ ಹೋಗಿ ಬೆಲ್ಲದ ಬಾಗೇವಾಡಿ ಉದಯಕುಮಾರ್ ಮಲ್ಲಿನಾಥ್ ಪಾಟೀಲ್ ಎಂಬವರಿಗೆ ಸೇರಿದ ಜಮೀನಿನಲ್ಲಿರುವ ಬಾವಿಗೆ ದೂಡಿ ಪ್ರವೀಣ್‌ನನ್ನು ಕೊಲೆ ಮಾಡಿದ್ದಳು. ಇದನ್ನೆಲ್ಲಾ ಕಂಡ ಪ್ರಜ್ವಲ್‌ಗೂ ಈ ವಿಚಾರ ಬೇರೆ ಯಾರಿಗಾದರು ಹೇಳಿದರೆ ಇದೇ ರೀತಿ ನಿನ್ನನ್ನೂ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಳು.
ಘಟನೆಯ ನಂತರ ಮಗ ಬಾವಿಗೆ ಬಿದ್ದು ತೀರಿಕೊಂಡ ಎಂದು ಸುಧಾ ನಾಟಕವಾಡಿದ್ದಳು. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ಸಂಪೂರ್ಣವಾಗಿ ತನಿಖೆ ನಡೆಸಿದರು. ತನಿಖೆಯಲ್ಲಿ ಪ್ರಜ್ವಲ್ ನಡೆದಿರುವ ಘಟನೆಯ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.










