ಹೇಗೆ ಬಿಜೆಪಿ ಅಧ್ಯಕ್ಷರ ಕಾರು ಅಲುಗಾಡಿತ್ತೋ, ಅದೇ ರೀತಿ ಸರ್ಕಾರ ಅಲುಗಾಡುತ್ತೆ: ಗಂಗಾಧರ್ ಕುಲಕರ್ಣಿ ಹೇಳಿಕೆ…

120
firstsuddi

ಚಿಕ್ಕಮಗಳೂರು : ನಗರದ ಶಂಕರ ಮಠದಲ್ಲಿ 18ನೇ ವರ್ಷದ ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸೇರಿದಂತೆ 50ಕ್ಕೂ ಹೆಚ್ಚು ಶ್ರೀರಾಮಸೇನೆಯ ಕಾರ್ಯಕರ್ತರಿಂದ ಮಾಲಾಧಾರಣೆ ಮಾಡಿಕೊಂಡರು. ಇಂದಿನಿಂದ ಏಳು ದಿನ ದತ್ತಮಾಲಾ ಅಭಿಯಾನ ನಡೆಯಲಿದ್ದು, ಮಾಲಾಧಾರಿಗಳು ನವೆಂಬರ್ 13 ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಪ್ರತಿ ವರ್ಷ ಬರೋದು, ಹೆಣ ಇಲ್ಲದ ಗೋರಿ ನೋಡೋದು ವಾಪಸ್ ಹೋಗೋದು ಆಗಿದೆ. ಎಚ್ಚರಿಕೆ ನೀಡಿ ಬೇಜಾರು ಮತ್ತು ಆಕ್ರೋಶವಾಗಿದೆ. ನಮಗೆ ಈ ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ ಎಂದು ಹೇಳಿದರು.

ಧರ್ಮದ ವಿಚಾರದಲ್ಲಿ ಡ್ರಾಮಾ ಒಳ್ಳೆಯದು ಅಲ್ಲ, ತಕ್ಷಣ ಏನಾದ್ರು ಆಗಲಿ ಎಂದು ಗಟ್ಟಿ ನಿರ್ಧಾರ ಮಾಡಿ. ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಆದೇಶಿಸಿ, ಹಿಂದೂ ಅರ್ಚಕರ ನೇಮಿಸಬೇಕು. ನವೆಂಬರ್ 13ನೇ ತಾರೀಖಿನೊಳಗೆ ಅರ್ಚಕರ ನೇಮಿಸದಿದ್ದರೆ ಪರಿಸ್ಥಿತಿ ಕಠಿಣವಾಗುತ್ತದೆ. ಹೇಗೆ ಬಿಜೆಪಿ ಅಧ್ಯಕ್ಷರ ಕಾರ್ ಅಲುಗಾಡಿತ್ತೋ, ಅದೇ ರೀತಿ ಸರ್ಕಾರ ಅಲುಗಾಡುತ್ತೆ ಎಂದು ಎಚ್ಚರಿಕೆ ಸಂದೇಶ ನೀಡಿದರು.

ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪರ ಪೀಠ ಹೋಗುತ್ತೆ ಎಂದು ಹೇಳಿದ್ದೆ. ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪ ಪೀಠ ಕಳೆದುಕೊಂಡರು. ಈಗ ಸಿಎಂ ಬಸವರಾಜ ಬೊಮ್ಮಾಯಿಗೂ ಹೇಳ್ತಿದ್ದೀವಿ, ಮುಂದೆ ಸರ್ಕಾರ ಬರಬೇಕಂದ್ರೆ ತಕ್ಷಣ ದತ್ತಪೀಠವನ್ನ ಹಿಂದುಗಳಿಗೆ ಒಪ್ಪಿಸಿ ಎಂದು ಒತ್ತಾಯಿಸಿದರು.