ಹೈದರಾಬಾದ್ : ಗುಜರಾತ್ ಗೋಧ್ರೋತ್ತರ ಗಲಭೆಯ ಕುರಿತಾಗಿ ಬಿಬಿಸಿ ಚಿತ್ರಿಸಿರುವ ಇಂಡಿಯಾ: ‘ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರವನ್ನು ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಪ್ರದರ್ಶಿಸಲಾಗಿದೆ.
ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿನ್ನೆ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಭದ್ರತಾ ಇಲಾಖೆಯಿಂದ ವರದಿಯನ್ನು ನಿರೀಕ್ಷಿಸಲಾಗಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ.
ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರ ಗುಜರಾತ್ ಗಲಭೆಯ ಕುರಿತಾಗಿದೆ. ಇದರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಅಂಶಗಳಿವೆ ಎಂಬುದು ವಿವಾದಕ್ಕೆ ಕಾರಣವಾಗಿದೆ. ಇದೊಂದು ಪೂರ್ವನಿರ್ಧರಿತ ಮತ್ತು ಸುಳ್ಳು ಪ್ರಚಾರದ ಸಾಕ್ಷ್ಯಚಿತ್ರ ಎಂದು ಬಿಜೆಪಿ ಈಗಾಗಲೇ ಟೀಕಿಸಿದೆ. ಅಲ್ಲದೇ ಇದನ್ನು ಭಾರತದಲ್ಲಿ ಪ್ರದರ್ಶಿಸಬಾರದು ಎಂದು ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಅಲ್ಲದೇ ಯಾವುದೇ ಲಿಂಕ್‍ಗಳು ವಿನಿಮಯವಾಗದಂತೆ ತಡೆಯಲು ಎಲ್ಲ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.










