ಹೊಡೆಯುವುದು ಸಿದ್ದರಾಮಯ್ಯ, ಧಮ್ಕಿ ಹಾಕುವುದು ಡಿಕೆಶಿ ಸಂಸ್ಕೃತಿ : ಪ್ರಹ್ಲಾದ್ ಜೋಶಿ.

44
firstsuddi

ಹುಬ್ಬಳ್ಳಿ : ಕಾರ್ಯಕರ್ತರಿಗೆ ಹೊಡೆಯುವುದು ಸಿದ್ದರಾಮಯ್ಯ ಸಂಸ್ಕೃತಿ. ಧಮ್ಕಿ ಹಾಕುವುದು ಡಿ.ಕೆ.ಶಿವಕುಮಾರ್ ಸಂಸ್ಕೃತಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ ಬಳಿ 1,248 ಜಿ+3 ಮಾದರಿ ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳ ಮೇಲೆ ಒತ್ತಡ ಹಾಕಿಲ್ಲ. ಡಿ.ಕೆ.ಶಿವಕುಮಾರ್ ಬಾಲಿಶ ಹೇಳಿಕೆ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಕಾಲದಲ್ಲಿಯೇ ಆಯೋಗ ರಚಿಸಲಾಗಿತ್ತು. ಆದರೆ ಅವರ ಅಧಿಕಾರದಲ್ಲಿ ಜಾರಿಗೆ ತರಲಿಲ್ಲ. ನಾವು ತಂದಿರೋದಕ್ಕೆ ಹೊಟ್ಟೆಕಿಚ್ಚು. ತಾವು ಅಧಿಕಾರಕ್ಕೆ ಬಂದರೆ ರದ್ದು ಮಾಡುತ್ತೇವೆ ಅಂತಾರೆ. ಅದರ ಅರ್ಥ ಒಕ್ಕಲಿಗರಿಗೆ, ಲಿಂಗಾಯಿತರಿಗೆ ಮೀಸಲಾತಿ ಕೊಟ್ಟಿರೋದಕ್ಕೆ ಕಾಂಗ್ರೆಸ್ ಸಹಮತವಿಲ್ಲ. ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾತ್ರ ಕಾಂಗ್ರೆಸ್ ಶಾಸಕರು ಹೋರಾಟ ಮಾಡಿದರು. ಎಲ್ಲರಿಗೂ ಮೀಸಲಾತಿ ಹೆಚ್ಚಿಸುವ ತಾಕತ್ತು ಕಾಂಗ್ರೆಸ್ ಗೆ ಇರಲಿಲ್ಲ. ಅವೈಜ್ಞಾನಿಕವಾಗಿ, ಅಸಂವಿಧಾನಿಕವಾಗಿ ಮುಸ್ಲಿಮರಿಗೆ ಇವರು ಮೀಸಲಾತಿ ಕೊಟ್ಟಿದ್ದರು. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬರುವುದಿಲ್ಲ. ಹೀಗಾಗಿ ಮುಸ್ಲಿಮರ ಮೀಸಲಾತಿಯನ್ನು ನಾವು ರದ್ದು ಮಾಡಿದ್ದೇವೆ. ಬಿಜೆಪಿ ಸರ್ಕಾರ ನಿರ್ಣಾಯಕ ಸರ್ಕಾರ. ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ. ಆದರೆ ಬಿಜೆಪಿ ಸರ್ವರಿಗೂ ಸಮಾನತೆ ಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

5 ವರ್ಷ ಮುಖ್ಯಮಂತ್ರಿಯಾದವರಿಗೆ, 11 ಬಾರಿ ಬಜೆಟ್ ಮಂಡಿಸಿದವರಿಗೆ ಕ್ಷೇತ್ರ ಸಿಗುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್, ಮುನಿಯಪ್ಪಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲ್ಲುವುದಿಲ್ಲ. ವರುಣಾ ಕ್ಷೇತ್ರದಲ್ಲೂ ಸಿದ್ದರಾಮಯ್ಯಗೆ ಸೋಲುವ ಭೀತಿ ಇದೆ. ಯಾವ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಅನ್ನೋ ವಿಶ್ವಾಸ ಇಲ್ಲ. ಮೊದಲು ಕೋಲಾರ ಅಂತ ಅನೌನ್ಸ್ ಮಾಡಿದ್ದರು. ಇದು ಯಾರೋ ಹೇಳಿದ್ದು ಅಲ್ಲ, ಅವರೇ ಹೇಳಿದ್ದು. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮೋಸ ಮಾಡಿದ ಪಾರ್ಟಿ. ಇವರ ಸರ್ಕಾರದಲ್ಲಿ ಅನ್ಯಾಯದ ಪರಮಾವಧಿ ಇತ್ತು. ಹೀಗಾಗಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲೂ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.

2004 ರಿಂದ 2014 ರ ವರೆಗೂ ಮನೆ ನಿರ್ಮಾಣಕ್ಕೆ 20 ಸಾವಿರ ಕೋಟಿ ರೂ. ಅವತ್ತಿನ ಸರ್ಕಾರ ಕೊಟ್ಟಿತ್ತು. ಆದರೆ ಮೋದಿ ಸರ್ಕಾರ ಮನೆ ಕಟ್ಟಲು 70 ಸಾವಿರ ಕೋಟಿ ಹಣ ಕೊಟ್ಟಿದೆ. 2004 ರಿಂದ 2014 ರ ವರೆಗೂ 13 ಲಕ್ಷ ಮನೆ ಮಂಜೂರ ಮಾಡಿದ್ದರು. ಆದರೆ ಅದು ಪೂರ್ಣ ಆಗಿರಲಿಲ್ಲ. ಆದರೆ ಮೋದಿ ಸರ್ಕಾರ 5 ವರ್ಷದಲ್ಲಿ 46 ಲಕ್ಷ ಮನೆಗಳನ್ನು ಕೊಟ್ಟಿದೆ. ಒಂದು ಕೋಟಿ 22 ಲಕ್ಷ ಮನೆಗಳಿಗೆ ನಾವು ಮಂಜೂರಾತಿ ಕೊಟ್ಟಿದ್ದೇವೆ. ಮನೆ ನಿರ್ಮಾಣಕ್ಕೆ ಯಾರಿಗೂ ಲಂಚ ಕೊಡುವ ಆಗತ್ಯವಿಲ್ಲ. ನನ್ನನ್ನು ಸೇರಿದಂತೆ ಯಾರಿಗೂ ಕೂಡ ಒಂದು ರೂಪಾಯಿ ಕೊಡಬೇಡಿ ಎಂದು ಕರೆ ನೀಡಿದರು.