ಹೊಸ ರಾಷ್ಟ್ರೀಯ ಪಕ್ಷದ ಹೆಸರು ಘೋಷಿಸಿದ ಕೆಸಿಆರ್.

66
firstsuddi

ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.

ತೆಲಂಗಾಣ ಭವನದಲ್ಲಿ ಕೆಸಿಆರ್ ಹೊಸ ಪಕ್ಷ ಘೋಷಣೆ ಮಾಡಿದ್ದು, ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್)​ ಎಂದಿದ್ದ ಅವರ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ(ಬಿಆರ್​ಎಸ್​) ಎಂದು ಹೆಸರಿಟ್ಟಿದ್ದಾರೆ. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ 280ಕ್ಕೂ ಹೆಚ್ಚು ಟಿಆರ್​ಎಸ್ ಪಕ್ಷದ ಕಾರ್ಯಕಾರಿ ಸದಸ್ಯರು, ಶಾಸಕರು ಮತ್ತು ಸಂಸದರು ಟಿಆರ್​ಎಸ್ ಅನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​)ನೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರನ್ನು ಬೆಂಬಲಿಸಲು ಹಿರಿಯ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಶಾಸಕರಾದ ಹೆಚ್ ಡಿ ರೇವಣ್ಣ, ಸಾ.ರಾ ಮಹೇಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಮುಂತಾದವರು ನಿನ್ನೆ ಹೈದರಾಬಾದ್ ಗೆ ತೆರಳಿದ್ದಾರೆ. ಇಂದು ಕೆಸಿಆರ್ ಅವರ ಹೊಸ ರಾಷ್ಟ್ರೀಯ ಪಕ್ಷ ಘೋಷಣೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರು ಪಾಲ್ಗೊಳ್ಳುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ.

ದೇಶಾದ್ಯಂತ ಬಿಜೆಪಿ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಹೆಸರನ್ನು ಮರುನಾಮಕರಣ ಮಾಡಿದ್ದಾರೆ.