ಹೋಟೆಲ್‌ಗೆ ಟ್ರಕ್ ಡಿಕ್ಕಿ- 10 ಮಂದಿ ದುರ್ಮರಣ…

77
firstsuddi

ಮುಂಬೈ: ಟ್ರಕ್‌ವೊಂದು ಹೋಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದಿದೆ.

ರಾಜ್ಯ ರಾಜಧಾನಿಯಿಂದ 300 ಕಿಮೀ ದೂರದಲ್ಲಿರುವ ಧುಲೆಯ ಮುಂಬೈ-ಆಗ್ರಾ ಹೆದ್ದಾರಿಯ ಪಲಾಸ್ನರ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟ್ರಕ್‌ನ ಬ್ರೇಕ್ ವಿಫಲವಾಗಿದ್ದರಿಂದ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಅತೀ ವೇಗದಲ್ಲಿ ಚಲಿಸುತ್ತಿದ್ದ ಟ್ರಕ್ ಹಿಂಬದಿಯಿಂದ ಎರಡು ದ್ವಿಚಕ್ರವಾಹನ, ಒಂದು ಕಾರು ಹಾಗೂ ಇನ್ನೊಂದು ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಟ್ರಕ್ ಹೆದ್ದಾರಿಯಲ್ಲಿ ಬಸ್ ನಿಲ್ದಾಣದ ಬಳಿ ಹೋಟೆಲ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಶಿರ್‌ಪುರ ಮತ್ತು ಧುಲೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.