ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಸ್ವೀಡನ್‍ನ ಪ್ರಥಮ ಮಹಿಳಾ ಪ್ರಧಾನಿ.

71
firstsuddi

ಸ್ಟಾಕ್‌ಹೋಮ್‌ : ಸ್ವೀಡನ್ ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಹಾಗೂ ಪ್ರಸ್ತುತ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿದ್ದ ಮ್ಯಾಗ್ಡಲೇನಾ ಆಂಡರ್ಸನ್ ಅವರು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗ್ರೀನ್ಸ್ ಪಕ್ಷವು ಆ್ಯಂಡರ್ಸನ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಈ ವೇಳೆ ಆಂಡರ್ಸನ್ ಅವರನ್ನು ನಾಯಕಿ ಎಂದು ಘೋಷಿಸಿದ ನಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಗ್ರೀನ್ ಪಾರ್ಟಿ ಬೆಂಬಲವನ್ನು ವಾಪಸ್ ಪಡೆದಿದೆ. ಅಲ್ಲದೇ ಸ್ವೀಡನ್ ನ ಸಂಸತ್ ಆದ ರಿಕ್ಸ್ ಡಾಗ್ ನಲ್ಲಿ ಬಜೆಟ್ ಮಸೂದೆ ಅಂಗೀಕಾರಗೊಳ್ಳದ ಕಾರಣಕ್ಕೆ ಮ್ಯಾಗ್ಡಲೇನಾ ಆಂಡರ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮ್ಯಾಗ್ಡಲೇನಾ ಆಂಡರ್ಸನ್ ಒಂದು ಪಕ್ಷವು ಬೆಂಬಲವನ್ನು ಹಿಂಪಡೆದರೆ, ಸಮ್ಮಿಶ್ರ ಸರ್ಕಾರವು ರಾಜೀನಾಮೆ ನೀಡಬೇಕು, ಪ್ರಧಾನಿಯಾಗಲು ಈಗಲೂ ಸಿದ್ಧವಿದ್ದೇನೆ ಎಂದಿದ್ದಾರೆ.