ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಗುರಿ : ಹೆಚ್.ಡಿ. ಕುಮಾರಸ್ವಾಮಿ.

257
firstsuddi

ಬೆಂಗಳೂರು : ಮೈತ್ರಿ ಸರ್ಕಾರ ಪತನವಾಗಲು ಕಾರಣವಾದ ಅನರ್ಹ ಶಾಸಕರನ್ನು ಉಪಚುನಾವಣೆಯಲ್ಲಿ ಸೋಲಿಸುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಜಂಟಿಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಅವರು, 15 ಕ್ಷೇತ್ರದಲ್ಲೂ ಅನರ್ಹ ಶಾಸಕರು ಸೋಲಬೇಕು. ಅವರನ್ನು ಸೋಲಿಸುವುದೇ ನನ್ನ ಮೊದಲ ಗುರಿ. ಅವರನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದೇನೆ. ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಇರುವ ಹೋರಾಟ ಬೇರೆ. ಇಲ್ಲಿ ಕಾಂಗ್ರೆಸ್ ನನ್ನ ಶತ್ರು ಅಲ್ಲ. ಆದರೆ ಅನರ್ಹರನ್ನು ಸೋಲಿಸುವುದೇ ನನ್ನ ಗುರಿ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಗೋಪಾಲಯ್ಯ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಗೋಪಾಲಯ್ಯ ಅವರಿಗೆ ಸರಿಸಮನಾದ ವ್ಯಕ್ತಿಯನ್ನು ನಿಲ್ಲಿಸಬೇಕು ಎಂದರು.
ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಕೋಪವಿದೆ. ಕುಮಾರಸ್ವಾಮಿ ಅವರ ಬಗ್ಗೆ ಇಲ್ಲ ಎಂಬ ಅನರ್ಹ ಶಾಸಕ ಕೆ.ಸುಧಾಕರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಕೆ.ಸುಧಾಕರ್ ಅವರಿಗೆ ಈಗ ನನ್ನ ಮೇಲೆ ಪ್ರೀತಿ ಹೆಚ್ಚಾಗಿದೆ. ನನ್ನ ಸರ್ಕಾರ ಪತನವಾಗಲು ಮೂಲ ಕಾರಣವೇ ಸುಧಾಕರ್. ಅವರು ನನ್ನನ್ನು ಭೇಟಿ ಮಾಡಲು ಕೂಡಾ ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಜನರಿಗೆ ಟೋಪಿ ಹಾಕುತ್ತಿದ್ದಾರೆ. ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಜಾಗ ಗುರುತಿಸಿದೆಯೇ? ಹಣ ಎಷ್ಟು ಹೂಡಿಕೆ ಮಾಡಿದ್ದಾರೆ? ಟೆಂಡರ್ ಆಗಿದೆಯೇ? ಎಂದು ಯಾವುದು ಗೊತ್ತಿಲ್ಲ. ಆದರೆ ಪಾಪ ಯಡಿಯೂರಪ್ಪ ಅವರು ಹೋಗಿ ಗುದ್ದಲಿ ಪೂಜೆ ಮಾಡಿದರು. ನನಗೆ ಸಿದ್ದರಾಮಯ್ಯ ಅವರ ಮೇಲೆ ಕೋಪವಿದೆ. ಕುಮಾರಸ್ವಾಮಿ ಅವರ ಮೇಲೆ ಇಲ್ಲ ಅಂತಾರೆ. ಆದರೆ ಇದೇ ಸುಧಾಕರ್ ಅಂದು ಸಿದ್ದರಾಮಯ್ಯ ಅವರಂತಹ ಸಿಎಂ ಇಲ್ಲ ಎಂದು ಬಹುಪರಾಕ್ ಹಾಡಿದ್ದರು ಎಂದು ಟೀಕಿಸಿದರು.