ಅನ್ ಲಾಕ್ 3.O ; ಸಹಜ ಸ್ಥಿತಿಯತ್ತ ಕರ್ನಾಟಕ…

77
firstsuddi

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಅನ್ ಲಾಕ್ 3.O ಜಾರಿಯಾಗಿದ್ದು, ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ರಾಜ್ಯ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಮೂರನೇ ಹಂತದ ಅನ್ ಲಾಕ್ ನಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದ್ದು, ನೈಟ್ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದೆ. ಇಂದು ಬೆಳಗ್ಗೆ 5 ಗಂಟೆಯಿಂದ ಜುಲೈ 19 ರ ಬೆಳಗ್ಗೆ 5 ಗಂಟೆಯವರೆಗೆ ಅನ್ ಲಾಕ್ 3.0 ಜಾರಿಯಲ್ಲಿ ಇರಲಿದೆ.

ಇಂದಿನಿಂದ ಶಾಪಿಂಗ್ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಗಳು ಓಪನ್ ಆಗ್ತಿವೆ. ಮಾಲ್ ಸೇರಿದಂತೆ ಇತರೆ ಮಳಿಗೆಗಳನ್ನು ರಾತ್ರಿ 9 ಗಂಟೆವರೆಗೂ ತೆರೆಯಬಹುದಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು.

ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಗಳು ಶೇ. 100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಬಹುದು. ವಾರ ಪೂರ್ತಿ ಮೆಟ್ರೋ ಸೇವೆ ಸಿಗಲಿದೆ. ಅಂತ್ಯಕ್ರಿಯೆಗೆ 20 ಜನರಷ್ಟೇ ಭಾಗಿಯಾಗಬಹುದಾಗಿದೆ. ಇತ್ತ ಬಾರ್, ರೆಸ್ಟೋರೆಂಟ್ ಗಳಲ್ಲಿ ರಾತ್ರಿ 9 ಗಂಟೆವರೆಗೂ ಕುಳಿತು ಕುಡಿಯಲು ಸರ್ಕಾರ ಅನುಮತಿ ನೀಡಿದ್ದು, ಹೋಟೆಲ್ ಗಳಲ್ಲೂ ರಾತ್ರಿ 9 ಗಂಟೆವರೆಗೂ ಕುಳಿತು ಅಲ್ಲೇ ಆಹಾರ ಸೇವಿಸಬಹುದಾಗಿದೆ.

ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ, ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಲ್ಲಿ 100 ಜನ ಭಾಗವಹಿಸಬಹುದು. ಎಲ್ಲಾ ವಲಯಗಳು ಅನ್ ಲಾಕ್ ಆದರೂ ಥಿಯೇಟರ್, ಪಬ್, ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಭೆ-ಸಮಾರಂಭಗಳಿಗೆ ನಿರ್ಬಂಧವಿದೆ. ಈಜುಕೊಳಕ್ಕೂ ನಿರ್ಬಂಧ ಇದೆ. ಆದರೆ ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ, ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅನುಮತಿ ನೀಡಲಾಗಿದೆ.