ಬೆಂಗಳೂರು: ಅಪಾರ್ಟ್‍ಮೆಂಟ್‍ನ 10ನೇ ಮಹಡಿಯಿಂದ ಬಿದ್ದು ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ನಗರದ ಯಲಹಂಕ ಬಳಿಯ ನಾಗೇನಹಳ್ಳಿಯಲ್ಲಿ ನಡೆದಿದೆ.
ಲಕ್ನೋ ಮೂಲದ ಅಮೃತಾ ಶರ್ಮ (27) ಸಾವನ್ನಪ್ಪಿದ ಮಹಿಳೆ. ಕುಟುಂಬದ ಜೊತೆ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಹಿಳೆ ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಕಿಚನ್‌ಗೆ ಅಟ್ಯಾಚ್ ಆದ ಬಾಲ್ಕನಿಯ ಹತ್ತನೇ ಮಹಡಿಯಿಂದ ಬಿದ್ದಿದ್ದಾರೆ. ಕೂಡಲೇ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮಹಿಳೆಯು ತನ್ನ ತಂದೆಯನ್ನು ಕಳೆದುಕೊಂಡು ನೊಂದಿದ್ದರು. ಆಕೆಯ ತಾಯಿ ಲಕ್ನೋದಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










