ವಾಷಿಂಗ್ಟನ್ : ಸಹಜ ಸ್ಥಿತಿಯತ್ತ ಮರಳುತ್ತಿರುವ ಅಮೆರಿಕ ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್(ಸಿಡಿಸಿ) ತನ್ನ ಜನತೆಗೆ ಸೂಚಿಸಿದೆ.
ನಿನ್ನೆ ಈ ಕುರಿತು ಘೋಷಣೆಯಾಗುತ್ತಿದ್ದಂತೆಯೇ ವೈಟ್ ಹೌಸ್ ನ ರೋಸ್ ಗಾರ್ಡನ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾಸ್ಕ್ ಧರಿಸದೇ ಭಾಗವಹಿಸಿದ್ದರು. ಬಳಿಕ ಮಾತನಾಡಿದ ಬೈಡನ್ ಅವರು, ಇದೊಂದು ಅದ್ಭುತ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. ಅಸಮಾನ್ಯ ಸಾಧನೆಯಿಂದ ಇದು ಸಾಧ್ಯವಾಗಿದೆ, ಅತೀ ವೇಗವಾಗಿ ಅಮೆರಿಕನ್ನರಿಗೆ ನಾವು ಲಸಿಕೆ ನೀಡುತ್ತಿದ್ದೇವೆ ಎಂದು ಬೈಡೆನ್ ತಿಳಿಸಿದ್ದಾರೆ.
ಹೊಸ ಕೋವಿಡ್ ಮಾರ್ಗಸೂಚಿ ಹೊರಡಿಸಿರುವ ಸಿಡಿಸಿ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರು ಫೆಡರಲ್, ಸ್ಟೇಟ್, ಸ್ಥಳೀಯ ಅಥವಾ ಪ್ರಾದೇಶಿಕ ಕಾನೂನು, ನಿಯಮಗಳು, ಸ್ಥಳೀಯ ವ್ಯವಹಾರ ಹಾಗೂ ಕೆಲಸದ ಮಾರ್ಗಸೂಚಿಗಳು ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಹೊರತುಪಡಿಸಿ ಉಳಿದೆಡೆ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ತಮ್ಮ ಕೆಲಸಗಳನ್ನು ನಿರಾತಂಕವಾಗಿ ಮಾಡಬಹುದು ಎಂದು ಎಂದು ಸಲಹೆ ನೀಡಿದೆ.










