ಅಯೋಧ್ಯೆ ರಾಮಮಂದಿರಕ್ಕೆ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಆಯ್ಕೆ…

53
firstsuddi

ಬೆಂಗಳೂರು: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ. ಅದರೊಂದಿಗೆ ವಿಶ್ವವೇ ಎದುರು ನೋಡುತ್ತಿರುವ ಅಯೋಧ್ಯೆ ರಾಮಮಂದಿರದಲ್ಲಿ ಕರ್ನಾಟಕದ ರಾಮ ಇರಲಿದ್ದಾನೆ.

ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಶಿಲ್ಪಿ ಅರುಣ್ ಅವರ ಮೈಸೂರಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಮೆ ಜೊತೆಗೆ ಶಿಲ್ಪಿ ಯೋಗಿರಾಜ್ ಅರುಣ್ ಅವರ ಫೋಟೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ ಮತ್ತಿತರರು ಹಂಚಿಕೊಂಡಿದ್ದಾರೆ.

“ಶ್ರೀರಾಮ-ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ, ಇದೀಗ ರಾಮನೂರಿನ ಗುಡಿಯನು ಮೈಸೂರಿನ ಬಾಲರಾಮನು ಬೆಳಗುವನು. ಮೈಸೂರಿನ ಅಪ್ರತಿಮ ಶಿಲ್ಪ ಕಲಾ ಪ್ರತಿಭೆ ಅರುಣ್ ಯೋಗಿರಾಜ್ ಅವರ ಭಕ್ತಿ ಕೌಶಲ್ಯದ ಕೆತ್ತನೆಯಿಂದ ಪಡಿಮೂಡಿದ ರಾಮಲಲಾ ಮೂರ್ತಿಯು ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿರುವುದು ಮೈಸೂರಿನ ಹಿರಿಮೆ, ಕರುನಾಡ ಹೆಮ್ಮೆಯಾಗಿದೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಮೈಸೂರು ಮೂಲದ ಪ್ರಖ್ಯಾತ ಶಿಲ್ಪಿ ಅರುಣ್ ಆಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ರಾಮಮಂದಿರದ ವಿಗ್ರಹದ ಕೆತ್ತನೆಯನ್ನು ನೆರವೇರಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.