ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ಖರ್ಗೆಯನ್ನ ನನ್ನನ್ನಲ್ಲ: ಡಿಕೆಶಿ.

46

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‍ನಲ್ಲಿ ಮತ್ತೆ ಭುಗಿಲೆದ್ದಿರುವ ನಾಯಕತ್ವ ಬದಲಾವಣೆ ವಿಚಾರವಾಗಿ ಇದೀಗ ಡಿಸಿಎಂ ಡಿ.ಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷ ಸ್ಥಾನದ ವಿಚಾರ ಸ್ಪಷ್ಟಪಡಿಸಬೇಕಾಗಿರುವುದು ನಾನಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಲಿ. ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ, ಖರ್ಗೆ ಅವರನ್ನು ಎಂದು ಹೇಳಿದ್ದಾರೆ. ಯಾವುದಾದರೂ ವಿಚಾರ ಇದ್ದರೆ ನಾನೇ ಸುದ್ದಿಗಾರರಿಗೆ ತಿಳಿಸುತ್ತೇನೆ. ಯಾರೂ ಕೂಡ ಬಹಿರಂಗವಾಗಿ ಮಾತನಾಡಬಾರದು ಎಂದು ಹೇಳಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ ಸಹ ಬೆಳಗಾವಿಗೆ ಬರುತ್ತಿದ್ದಾರೆ. ಏನಾದರೂ ಇದ್ದರೆ ರಾಹುಲ್ ಗಾಂಧಿ, ಖರ್ಗೆ ಜತೆ ಮಾತನಾಡಲಿ. ಅವರವರ ಶ್ರಮಕ್ಕೆ ತಕ್ಕ ಸ್ಥಾನವನ್ನು ನಾಯಕರು ಕೊಡುತ್ತಾರೆ. ಶ್ರಮಪಟ್ಟು ನಾನು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಲ್ಲ, ಕಾರ್ಯಕರ್ತರು ತಂದಿದ್ದು. ನಮ್ರತೆಯಿಂದ ಮನವಿ ಮಾಡುತ್ತೇನೆ, ಕಾಂಗ್ರೆಸ್ ಎಂಬುದು ಕಾರ್ಯಕರ್ತರ ಪಕ್ಷ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಮಹಾತ್ಮ ಗಾಂಧಿಯೇ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ಮನಸ್ಸು ಮಾಡಿದ್ದರೆ ಪ್ರಧಾನಿ ಆಗುತ್ತಿರಲಿಲ್ಲವೇ ಎಂದು ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದರು.