ಇಂದಿನಿಂದ ಚಾರ್ಮಾಡಿ ಘಾಟ್‍ನಲ್ಲಿ ಬಸ್ ಸಂಚಾರಕ್ಕೆ ಅವಕಾಶ…

181
Firstsuddi

ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್‍ನಲ್ಲಿ ಕೆಎಸ್‍ಆರ್ ಟಿಸಿ ಬಸ್ (ಕೆಂಪು ಬಸ್) ಸೇರಿದಂತೆ ಆರು ಚಕ್ರದ ಲಾರಿಗಳು ಹಾಗೂ ಲಘುವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿ ನಿನ್ನೆ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಹೆದ್ದಾರಿ-73 (ಹಳೆಯ ಸಂಖ್ಯೆ 234) ಮಂಗಳೂರು, ತುಮಕೂರು ರಸ್ತೆಯ ಕಿ.ಮೀ 86.200 (ಚಿಕ್ಕಮಗಳೂರು ಜಿಲ್ಲಾ ಗಡಿ) ಯಿಂದ ಕಿ.ಮೀ 99.200 (ಕೊಟ್ಟಿಗೆಹಾರ) ರಸ್ತೆಯ ಮಾರ್ಗದಲ್ಲಿ ಲಘು ಹಾಗೂ ಕೆಲವು ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಡಳಿತದ ಅದೇಶದಂತೆ ಪ್ರಸ್ತಾಪಿತ ಮಾರ್ಗದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ವತಿಯಿಂದ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದು ಹಾಗೂ ಈ ಮಾರ್ಗದಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಚಾರ್ಮಾಡಿ ಘಾಟ್ ಭಾಗದಲ್ಲಿ ಬಹಳಷ್ಟು ಕಡೆ ಭೂಕುಸಿತದಿಂದ ರಸ್ತೆಗೆ ತೀವ್ರತರವಾದ ದಕ್ಕೆ ಉಂಟಾಗಿರುವುದರಿಂದ ಅತ್ಯಂತ ಜಾಗರೂಕತೆಯಿಂದ ನಿಗಧಿತ ವೇಗದ ಮಿತಿಯೊಂದಿಗೆ ವಾಹನಗಳು ಸಂಚರಿಸುವಂತೆ ಸೂಚಿಸಲಾಗಿದೆ.

ಲಘು ವಾಹನಗಳಾದ ಕೆಎಸ್‍ಆರ್ ಟಿಸಿ (ಕೆಂಪು)ಬಸ್, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೆ ಟ್ರಾವೇಲರ್, ಅಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ

ಬಾರಿ ಘನ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶೀಫ್ಟ್ ಕಾರ್ಗೊ ಕಂಟೈನರ್ಸ್ ಹಾಗೂ ಲಾಂಗ್ ಚಾಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟೈಲರ್, ಕೆಎಸ್‍ಆರ್‍ಟಿಸಿ ರಾಜಹಂಸ ಬಸ್ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆಯ ವಾಹನಗಳ ಸಂಚಾರವನ್ನು ನಿಷೇದಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.