ಇಂದಿನಿಂದ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಆರಂಭ…

98
firstsuddi

ಬಹುನಿರೀಕ್ಷಿತ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್(ಪಿಕೆಎಲ್)ಗೆ ಅಹಮದಾಬಾದ್‌ನಲ್ಲಿ ಇಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ದಿನದ ಮತ್ತೊಂದು ಪಂದ್ಯ ಯು ಮುಂಬಾ ಹಾಗೂ ಯುಪಿ ಯೋಧಾಸ್ ನಡುವೆ ನಡೆಯಲಿದೆ.

ಪ್ರೊ ಕಬಡ್ಡಿ ಲೀಗ್ 2023ರಲ್ಲಿ ಒಟ್ಟು 132 ಪಂದ್ಯಗಳು ನಡೆಯಲಿದ್ದು, ಲೀಗ್‌ನ 10ನೇ ಸೀಸನ್ ಇಂದಿನಿಂದ ಅಂದರೆ ಡಿಸೆಂಬರ್ 2 ರಿಂದ ಆರಂಭವಾಗಿ 21 ಫೆಬ್ರವರಿ 2024 ರವರೆಗೆ ನಡೆಯಲಿದೆ.

ಈ ಲೀಗ್ ತನ್ನ ಹಳೆಯ ಸ್ವರೂಪಕ್ಕೆ ಮರಳಿದ್ದು, ಅಂದರೆ ಈಗ 12 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಸದ್ಯ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದ್ದು, 2ನೇ ವಾರ ಅಂದರೆ ಡಿ.8ರಿಂದ 13ರ ವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಬಳಿಕ ಪುಣೆ (ಡಿ.15-ಡಿ.20), ಚೆನ್ನೈ (ಡಿ.22-27), ನೋಯ್ಡಾ (ಡಿ.29-ಜ.3), ಮುಂಬೈ (ಜ.5-10), ಜೈಪುರ (ಜ.12-17), ಹೈದರಾಬಾದ್ (ಜ.19-24), ಪಾಟ್ನಾ (ಜ.26-31), ಡೆಲ್ಲಿ (ಫೆ.2-7), ಕೋಲ್ಕತಾ(ಫೆ.9-14), ಪಂಚಕುಲ(ಫೆ.16-21) ಟೂರ್ನಿಗೆ ಆತಿಥ್ಯ ವಹಿಸಲಿವೆ.

ಟೂರ್ನಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡ ಇತರ ತಂಡಗಳ ವಿರುದ್ಧ ಲೀಗ್ ಹಂತದಲ್ಲಿ 2 ಬಾರಿ ಆಡಲಿವೆ. ಬಹುತೇಕ ದಿನ ಎರಡೆರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ 9 ಗಂಟೆಗೆ ಆರಂಭಗೊಳ್ಳಲಿದೆ.

ಪ್ರೊ ಕಬಡ್ಡಿ ಲೀಗ್ 2023 ಪಂದ್ಯಗಳ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ಎಲ್ಲಾ ಚಾನಲ್‌ಗಳಲ್ಲಿ ಅಂದರೆ, ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 2 ನಲ್ಲಿ ಲಭ್ಯವಿರುತ್ತದೆ. ಪ್ರೊ ಕಬಡ್ಡಿ ಲೀಗ್ ಪಂದ್ಯಗಳ ಉಚಿತ ಲೈವ್ ಸ್ಟ್ರೀಮಿಂಗ್ ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.