ಚಿತ್ರದುರ್ಗ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯು ರಾಜ್ಯಕ್ಕೆ ಬಂದು ಈವರೆಗೆ 11 ದಿನವಾಗಿದೆ. ಸದ್ಯ ಪಾದಯಾತ್ರೆಯು ಇಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಬಳಿಯಿಂದ ಆರಂಭವಾಗಿದೆ.
ಚಳ್ಳಕೆರೆ ತಾಲೂಕಿಗೆ ಆಗಮಿಸುತ್ತಿದ್ದಂತೆ ಲಂಬಾಣಿ ಮಹಿಳೆಯರು ನೃತ್ಯದ ಮೂಲಕ ಅದ್ಧೂರಿಯಾಗಿ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿದರು. ಬಳಿಕ ಬಾಲಕಿಯೊಬ್ಬಳು ಭರತನಾಟ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಳು. ಬಾಲಕಿಯ ಭರತನಾಟ್ಯಕ್ಕೆ ರಾಹುಲ್ ಮನಸೋತರು.
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ವಿದ್ಯಾರ್ಥಿಗಳು ಸಹ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳ ಕೈ ಹಿಡಿದು ರಾಹುಲ್ ಪಾದಯಾತ್ರೆ ನಡೆಸಿದರು.
ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು, ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಾಥ್ ನೀಡುತ್ತಿದ್ದಾರೆ.










