ಇಲಿ ಸಾಯಿಸಲು ವಿಷ ಬೆರೆಸಿ ಇಟ್ಟಿದ್ದ ಹಣ್ಣು ಸೇವಿಸಿ ಯುವತಿ ಸಾವು…

42
firstsuddi

ದಾವಣಗೆರೆ: ಇಲಿ ಸಾಯಿಸಲು ವಿಷ ಬೆರೆಸಿ ಇಟ್ಟಿದ್ದ ಹಣ್ಣು ಸೇವಿಸಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.

ಹೆಚ್. ಐಶ್ವರ್ಯಾ (21) ಮೃತ ಯುವತಿ. ಈಕೆ ನ್ಯಾಮತಿಯ ಸರ್ಕಾರಿ ಕಾಲೇಜ್ ನಲ್ಲಿ ಬಿಎ ಓದುತ್ತಿದ್ದಳು.

ಮನೆಯಲ್ಲಿ ಇಲಿಗಳು ಹೆಚ್ಚಾಗಿದ್ದರಿಂದ ಅವುಗಳನ್ನು ಹಿಡಿಯಲು ಕುಟುಂಬಸ್ಥರು ಹಣ್ಣಿಗೆ ವಿಷ ಸವರಿ ಇಟ್ಟಿದ್ದರು. ಆದರೆ ಇದನ್ನು ಗಮನಿಸದೇ ಯುವತಿ ಕಾಲೇಜು ಮುಗಿಸಿ ಮನೆಗೆ ಬಂದಾಗ ನೆಲದ ಮೇಲೆ ಬಿದ್ದಿದ್ದ ಹಣ್ಣನ್ನು ತಿಂದಿದ್ದಳು.

ಹಣ್ಣು ತಿಂದ ಯುವತಿಯ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆಯೇ ಕುಟುಂಬಸ್ಥರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ.

ಘಟನೆ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.