ಬೆಂಗಳೂರು: ಈರುಳ್ಳಿ ನಂತರ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಒಂದು ಕೆಜಿಗೆ 70-ರಿಂದ 80 ಇದ್ದ ಬೆಳ್ಳುಳ್ಳಿ ದರ ಇದೀಗ 300 ರಿಂದ 400 ರೂಪಾಯಿಗೆ ಏರಿಕೆಯಾಗಿದೆ.
ಮಳೆಯಾಗದ ಹಿನ್ನಲೆ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಹಾಗೂ ಹೈಬ್ರಿಡ್ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತತ್ತರಿಸಿದ್ದಾರೆ. ಸಗಟು ಮಾರುಕಟ್ಟೆಗೆ ಈಗ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗುತ್ತಿದೆ. ಈ ಹಿಂದೆ ದಿನಕ್ಕೆ 25ರಿಂದ 30 ವಾಹನಗಳಲ್ಲಿ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಇನ್ನು ದಕ್ಷಿಣ ರಾಜ್ಯಗಳಿಂದ ಕೂಡ ಬೆಳ್ಳುಳ್ಳಿ ಪೂರೈಕೆ ತಗ್ಗಿದೆ. ಇದು ಕೂಡ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ.
ಬೆಳ್ಳುಳ್ಳಿಯ ಕೊರತೆಯಿಂದಾಗಿ, ಕಳೆದ ಕೆಲವು ವಾರಗಳಲ್ಲಿ ಅದರ ಬೆಲೆ ಹೆಚ್ಚಾಗಿದೆ. ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುವ ಸಾಧ್ಯತೆಯಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.










