ಉಡುಪಿ: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ಮೂವರು ವಿದ್ಯಾರ್ಥಿನಿಯರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಶಬನಾಜ್, ಆಲ್ಫಿಯಾ, ಆಲಿಯಾಗೆ ಇಂದು ಉಡುಪಿ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ. ವಿವಿಧ ಸೆಕ್ಷನ್‌ಗಳಡಿ ಕಾಲೇಜು ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 509 (ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿರುವ ಕೃತ್ಯ) 204 (ಅರಿವಿಗೆ ಬಾರದಂತೆ ಮಾಡಿರುವ ಕೃತ್ಯ), 175 (ಉದ್ದೇಶ ಪೂರ್ವಕವಾಗಿ ಸೂಕ್ತ ದಾಖಲೆ ನೀಡದಿರುವುದು), 34 (ಸಾಮೂಹಿಕವಾಗಿ ಮಾಡಿರುವ ಕೃತ್ಯ) ಆರೋಪದಡಿ ಪ್ರಕರಣ ದಾಖಲಾಗಿದೆ.
ಖಾಸಗಿತನಕ್ಕೆ ಧಕ್ಕೆ ಆಗುವ ವೀಡಿಯೋ ಚಿತ್ರೀಕರಣ ಆಗಿದೆ. ವಿಷಯ ತಿಳಿದು ವೀಡಿಯೋ ಡಿಲೀಟ್ ಮಾಡಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಇದೊಂದು ಗಂಭೀರವಾದ ಅಪರಾಧ ಕೃತ್ಯವಾಗಿದೆ. ವೀಡಿಯೋ ಮಾಡಿ ತಪ್ಪೊಪ್ಪಿಕೊಂಡಿರುವ ಬಗ್ಗೆ ಆಡಳಿತ ಮಂಡಳಿ ಹೇಳಿದೆ. ಸತ್ಯಾಸತ್ಯತೆ ಪತ್ತೆ ಹಚ್ಚುವ ಉದ್ದೇಶದಿಂದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಲ್ಪೆ ಎಸ್ಐ ಸುಷ್ಮಾ ಜಿ.ಬಿ ತಿಳಿಸಿದ್ದರು.
ಉಡುಪಿಯ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಮೂವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಅರೆ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿದ್ದಾರೆ. ನಂತರ, ಅವುಗಳನ್ನು ಅವರದ್ದೇ ಸಮುದಾಯದ ಯವಕರಿಗೆ ಕಳುಹಿಸಲಾಗುತ್ತದೆ. ನಂತರ, ಆ ವೀಡಿಯೋಗಳನ್ನು ಕೆಲವೊಂದು ವಾಟ್ಸಾಪ್ ಗುಂಪುಗಳಿಗೆ ಹಂಚಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ಹಿಂದೂ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿದು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಇದನ್ನು ಪರಿಶೀಲನೆ ಮಾಡಿದ ಕಾಲೇಜು ಆಡಳಿತ ಮಂಡಳಿಯವರು, ಕ್ಯಾಮರಾ ಇಟ್ಟಿದ್ದ ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ನಂತರ ಕೃತ್ಯವನ್ನು ಎಸಗಿದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಕಾಲೇಜು ಆಡಳಿತ ಮಂಡಳಿ ಮುಚ್ಚಿಹಾಕಿತ್ತು ಎಂದು ಸುದ್ದಿ ಪ್ರಸಾರವಾಗಿತ್ತು.