ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿಯ ಹಿರಿಯ ಬಿಜೆಪಿ ಮುಖಂಡರೂ ಆಗಿರುವ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಮಾಲೀಕ ಸುಧಾಕರ ಶೆಟ್ಟಿ ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹೊಟೇಲ್ ಉದ್ಯಮದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದ ಸುಧಾಕರ್ ಶೆಟ್ಟಿ 2009 ರಿಂದ 12ರವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು 1999ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯು ಆರ್ ಸಭಾಪತಿ ವಿರುದ್ದ ಸೋಲು ಕಂಡಿದ್ದರು.
2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಲಭಿಸದ ಹಿನ್ನಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ 2013 ರ ಚುನಾವಣೆಯಲ್ಲಿ ಹಾಲಿ ಶಾಸಕರಾಗಿದ್ದ ರಘುಪತಿ ಭಟ್ ಅವರ ಸಿಡಿ ಗದ್ದಲದಿಂದ ಸ್ಪರ್ಧಿಸಲು ಹಿಂದೆ ಸರಿದ ಹಿನ್ನಲೆಯಲ್ಲಿ ಸುಧಾಕರ್ ಶೆಟ್ಟಿ ಕಣಕ್ಕಿಳಿದಿದ್ದರು. ಆದರೆ ಪ್ರಮೋದ್ ಮಧ್ವರಾಜ್ ವಿರುದ್ದ ಸೋಲು ಅನುಭವಿಸಿದ್ದರು.










