ಮೈಸೂರು : ನಾನು ಉದ್ದೇಶ ಪೂರ್ವಕವಾಗಿ ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು, ಒಡೆಯರ್ ಎಕ್ಸ್ ಪ್ರೆಸ್ ಎಂದು ಬದಲಾಯಿಸಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಿದ ಬೆನ್ನಲ್ಲೇ ವಿರೋಧ ಪಕ್ಷ ನಾಯಕರಿಂದ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಪ್ರತಾಪ್ ಸಿಂಹ ಖಡಕ್ ಉತ್ತರ ನೀಡಿದ್ದಾರೆ. ಟಿಪ್ಪುವಿಗೂ ಮೈಸೂರಿಗೂ ಏನು ಸಂಬಂಧ?, ಟಿಪ್ಪು ಏನು ಮೈಸೂರಿನವನಾ? ಅವನು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಟಿಪ್ಪು ಕೊಡುಗೆ ಏನಿದೆ? ಮೈಸೂರಿನ ಮಹಾರಾಜರು ಕೊಟ್ಟಿರುವ 100 ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪುವನ್ನು ಬೆಂಬಲಿಸುವವರು ಟಿಪ್ಪು ಕೊಟ್ಟಿರುವ 3 ಸಾಧನೆಗಳನ್ನು ಹೇಳಿ ಸಾಕು ಎಂದು ಸವಾಲು ಹಾಕಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾಲಯ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದು. ಆದರೂ ಅವರ ಬಗ್ಗೆ ಸಿದ್ದರಾಮಯ್ಯ ಉಡಾಫೆಯಿಂದ ಮಾತನಾಡುತ್ತಾರೆ. ಈ ಹಿಂದೆ ದೇವರಾಜ ಮಾರುಕಟ್ಟೆ ಸಂಬಂಧ ರಾಜರನ್ನು ಏಕ ವಚನದಲ್ಲಿ ಮಹಾರಾಜ ಏನು ಅವನ ಸ್ವಂತ ದುಡ್ಡಿನಿಂದ ಅಭಿವೃದ್ಧಿ ಮಾಡಿದ್ದಾನಾ ಎಂದಿದ್ದ ಸಿದ್ದರಾಮಯ್ಯ ಟಿಪ್ಪು ಪರ ಮಾತನಾಡುತ್ತಾರೆ. ಮೈಸೂರಿನ ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಟಿಪ್ಪು ಹೆಸರನ್ನು ರೈಲಿನಿಂದ ತೆಗೆದ ಮಾತ್ರಕ್ಕೆ ಜನರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಒಬ್ಬ ಕನ್ನಡ ವಿರೋಧಿ. ಪರ್ಷಿಯನ್ ಭಾಷೆಯನ್ನು ಕನ್ನಡದ ಮೇಲೆ ಹೇರಿದ್ದಾನೆ. ಕಂದಾಯ ಇಲಾಖೆಯಲ್ಲಿನ ಪ್ರತಿಯೊಂದು ಪದಗಳು ಪರ್ಷಿಯನ್ ಕಡೆಯಿಂದ ಬಂದಿದ್ದು, ಅದನ್ನು ಬದಲಾಯಿಸಬೇಕು ಎಂದರು.










