ಎರಡು ತಿಂಗಳಲ್ಲಿಯೇ ಬರೋಬ್ಬರಿ ಒಂಬತ್ತು ಬಾರಿ ಕಚ್ಚಿದ ಹಾವು- ಬಾಲಕ ಆರೋಗ್ಯ…

142
firstsuddi

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಓರ್ವ ಬಾಲಕನಿಗೆ ಹಾವೊಂದು ಕಳೆದ ಎರಡು ತಿಂಗಳಲ್ಲಿಯೇ ಬರೋಬ್ಬರಿ 9 ಬಾರಿ ಕಚ್ಚಿದೆ. ಆದರೂ ಬಾಲಕ ಆರೋಗ್ಯವಾಗಿದ್ದಾನೆ.

ಹಲಕರ್ಟಿ ಗ್ರಾಮದ ವಿಜಯಕುಮಾರ್ ಮತ್ತು ಉಷಾ ದಂಪತಿಯ ಪುತ್ರ ಪ್ರಜ್ವಲ್ (15) ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನಿಗೆ ಎರಡು ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ಬಾರಿ ಹಾವು ಕಚ್ಚಿದೆ.

ಪ್ರಜ್ವಲ್‍ಗೆ ಹಲಕರ್ಟಿ ಗ್ರಾಮದ ಮನೆಯಲ್ಲಿ ಜುಲೈ 3 ರಂದು ಮೊದಲ ಬಾರಿ ಹಾವು ಕಡಿದಿತ್ತು. ಕೂಡಲೇ ಪೋಷಕರು ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಅದಾದ ಬಳಿಕ ನಾಲ್ಕು-ಐದು ದಿನಗಳ ಮಧ್ಯೆದಲ್ಲಿ ಈ ಬಾಲಕನಿಗೆ ನಿರಂತರವಾಗಿ ಇಲ್ಲಿಯವರೆಗೆ ಒಟ್ಟು 9 ಬಾರಿ ಹಾವು ಕಡಿತವಾಗಿರೋದು ಬೆಳಕಿಗೆ ಬಂದಿದೆ.

ಹಾವಿನಿಂದ ಒಂಬತ್ತು ಬಾರಿ ಕಡಿತಕ್ಕೆ ಒಳಗಾದಾಗ 5 ಬಾರಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಮೂರು ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ. ಆದರೆ ಇಲ್ಲಿಯವರೆಗೂ ಈ ಹಾವು ಪ್ರಜ್ವಲ್ ಬಿಟ್ಟು ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ.

ಸದ್ಯ ಪ್ರಜ್ವಲ್ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರತಿ ಬಾರಿ ಈ ಬಾಲಕನ ಮೇಲೆ ಮಾತ್ರ ಹಾವು ಕಚ್ಚಿರುವುದಾಗಿ ಹೇಳುತ್ತಿರುವುದು ಸಹ ಹಲವು ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ. ಇನ್ನೂ ಈತನ ಪೋಷಕರು ಈ ಹಾವಿನಿಂದ ಮುಕ್ತಿ ಕೊಡಿಸಲು ಸಿಕ್ಕ ಸಿಕ್ಕ ದೇವರುಗಳ ಮೊರೆ ಹೋಗುತ್ತಿದ್ದಾರೆ.