ನವದೆಹಲಿ : ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರ “ಒಂದೇ ದೇಶ, ಒಂದೇ ರೇಶನ್ ಕಾರ್ಡ್” ಎಂಬ ಯೋಜನೆಯನ್ನು ಜಾರಿಗೊಳಿಸಲು ನಿರ್ಧಾರ ಮಾಡಿದ್ದು, ಈ ಯೋಜನೆಯಿಂದಾಗಿ ವಲಸೆ ಹೋಗುವ ಕಾರ್ಮಿಕರಿಗೆ ಅನುಕೂಲವಾಗಲಿದ್ದು, ಅವರಿಗೆ ಪೂರ್ಣ ಆಹಾರದ ಭದ್ರತೆ ದೊರೆಯಲಿದೆ. ವಲಸೆ ಹೋಗುವ ಕಾರ್ಮಿಕರು ತಮ್ಮ ನಿರ್ಧಿಷ್ಟ ನ್ಯಾಯಬೆಲೆ ಅಂಗಡಿಯಲ್ಲಿ ಧಾನ್ಯಗಳನ್ನು ಖರೀದಿಸುವ ಬದಲಾಗಿ ತಮಗೆ ಹತ್ತಿರವಿರುವ ಯಾವುದಾದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಧಾನ್ಯಗಳನ್ನು ಖರೀದಿಸಬಹುದಾಗಿದೆ. ಇದರಿಂದಾಗಿ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹಾಗೂ ಒಬ್ಬ ವ್ಯಕ್ತಿ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್‍ಗಳನ್ನು ಹೊಂದುವ ಅವಶ್ಯಕತೆಯನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.