ಚಿತ್ರದುರ್ಗ : ಐಎಎಸ್ ಕನಸು ಕಂಡಿರುವ ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಆಸರೆಯಾಗಿರುವ ದೃಶ್ಯ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಡುದರಹಳ್ಳಿಯಲ್ಲಿ ಕಂಡುಬಂದಿದೆ. ಈ ತಂತ್ರಜ್ಞಾನದ ಯುಗದಲ್ಲೂ ಕಡುದರಹಳ್ಳಿ ಗ್ರಾಮದಲ್ಲಿ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ತಾಯಿ ವಿಜಯಲಕ್ಷ್ಮಿ ಎಂಬುವವರು ಅವರ ಕೆಲಸವನ್ನು ಬಿಟ್ಟು ತಮ್ಮ ವಿಶೇಷಚೇತನ ಮಗ ರಾಜೇಶ್ ಬಾಬುನನ್ನು ಪ್ರತಿನಿತ್ಯ ಹೆಗಲ ಮೇಲೆ ನಾಲ್ಕು ಕಿಲೋ ಮೀಟರ್ ದೂರ ಹೊತ್ತುಕೊಂಡು ಸಾಗಿ ಓದಿಸುತ್ತಿದ್ದಾರೆ. ಓಡಾಡಲು ಶಕ್ತಿಯಿಲ್ಲದ ರಾಜೇಶ್ ಬಾಬು ಏಳನೇ ತರಗತಿಯವರೆಗೂ ತಮ್ಮ ಸ್ವಗ್ರಾಮವಾದ ಕಡುದರಹಳ್ಳಿಯಲ್ಲಿ ಓದಿದ್ದು, ಇನ್ನು ಮುಂದೆ ಓದಿ ಐಎಎಸ್ ಆಗಬೇಕೆಂದು ಕನಸು ಕಂಡಿರುವ ರಾಜೇಶ್ ಬಾಬು ತನ್ನ ತಾಯಿಯ ಹೆಗಲ ಆಸರೆಯನ್ನು ಪಡೆದು ಪ್ರತಿನಿತ್ಯ ಕಡುದರಹಳ್ಳಿಯಿಂದ 4 ಕಿ.ಮೀ ದೂರವಿರುವ ಮಿರಾಸಾಬಿಹಳ್ಳಿಯ ರಾಣಿಕೆರೆ ಹೈಸ್ಕೂಲಿಗೆ ಬಂದು 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ವಿಜಯಲಕ್ಷ್ಮಿ ಅವರಿಗೆ ಮೂರು ಮಕ್ಕಳಿದ್ದು, ಪತಿ ಇಲ್ಲವಾದರೂ ವಿಜಯಲಕ್ಷ್ಮಿ ಅವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ತಮ್ಮ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮವಹಿಸುತ್ತಿದ್ದಾರೆ.










