ಕಡೂರು:ನದಿ ನೀರನ್ನ ಕೆರೆಗೆ ಹರಿಸಲು ರೈತರ ವಿರೋಧ: ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ 

36
ಚಿಕ್ಕಮಗಳೂರು:ನದಿ ನೀರಿಗಾಗಿ ಎರಡು ಊರುಗಳ ರೈತರು ಹೋರಾಟ ನಡೆಸಿರುವ ಘಟನೆ   ಕಡೂರು ತಾಲೂಕಿನಲ್ಲಿ ನಡೆದಿದೆ. ಕಡೂರು ತಾಲೂಕಿನಲ್ಲೇ ಹುಟ್ಟಿ ಹರಿಯುವ ವೇದಾವತಿ ನೀರನ್ನ ಹುಲಿಕೆರೆ ಮತ್ತು ನಾಗೇನಹಳ್ಳಿ ಕೆರೆಗಳಿಗೆ ಹರಿಸುವುದನ್ನು ವಿರೋಧಿಸಿ ಕಡೂರು ಹಾಗೂ ಸಖರಾಯಪಟ್ಟಣದ ರೈತರ ನಡುವೆ ವಾಕ್ಸಮರ ನಡೆದು, ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಕಡೂರು ಪಟ್ಟಣದಲ್ಲಿಸಭೆ ನಡೆಸಿದ ಬಳಿಕ ರೈತರು ಸಖರಾಯಪಟ್ಟಣ ಬಳಿಯ ಅಗ್ರಹಾರದ ಸಮೀಪ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಖರಾಯಪಟ್ಟಣದ ರೈತರು ಹಾಗೂ ಕಡೂರು ಭಾಗದ ರೈತರ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕಡೂರು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕಡೂರು ಶಾಸಕ ಕೆ‌.ಎಸ್.ಆನಂದ್ ಸಹ ಆಗಮಿಸಿ ರೈತರ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿ ನೀರಿನ ವಿಚಾರದಲ್ಲಿ ರೈತರು ಶಾಂತಿಯುತ ಹೋರಾಟ ಮಾಡಬೇಕು. ಯಾವುದೇ ಗಲಾಟೆ-ಗದ್ದಲ ಬೇಡ. ಯಾರೂ ಸಹನೆ ಕಳೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರು.ಸಭೆ ಬಳಿಕ ರೈತರು ಒಗ್ಗೂಡಿ ಕೆರೆ ಇರುವ ಸ್ಥಳಕ್ಕೆ ತೆರಳಿದ್ದರು. ಆಗ ಅಲ್ಲಿದ್ದ ಕೆಲವರಿಗೂ ಕಡೂರಿನಿಂದ ತೆರಳಿದ್ದ ರೈತರ ನಡುವೆ ಮಾತಿನ ಚಕಮಕಿ ನಡೆದು ಒಂದಷ್ಟು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಸ್ಥಳದಲ್ಲಿದ್ದ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಸ್ಥಿತಿಯನ್ನ ಅವಲೋಕಿಸಿದ್ದಾರೆ.