ಬೆಂಗಳೂರು : ಜೆಡಿಎಸ್ ಎಂಎಲ್‍ಸಿ ಆಗಿರುವ ಭೋಜೇಗೌಡ ಅವರ ಕಾರಿನ ನಂಬರ್ ಬಳಸಿ, ಕದ್ದ ಕಾರನ್ನ ಮಾರಾಟ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಕ್ವೀನ್ ರಸ್ತೆಯಲ್ಲಿರುವ ಐ ಕಾರ್ಸ್ ಸ್ಟುಡಿಯೋದಲ್ಲಿ ಭೋಜೇಗೌಡ ಅವರ ಇನೋವಾ ಕಾರಿನ ನಂಬರ್ ಹಾಕಿ ಮಾರಾಟಕ್ಕೆ ನಿಲ್ಲಿಸಲಾಗಿತ್ತು. ಈ ಕಾರಿನ ನಂಬರ್ ನೋಡಿದ ಭೋಜೆಗೌಡರ ಪಿಎ ಮಾದೇಶ್ ಒಮ್ಮೆಲೇ ಶಾಕ್ ಆಗಿದ್ದಾರೆ. ಇದರಿಂದ ಅನುಮಾನಗೊಂಡು ಶೋರೂಂನಲ್ಲಿ ಆ ಕಾರಿನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಶೋರೂಂನವರು ಕಾರನ್ನು ಮಾರಾಟಕ್ಕೆ ಇರುವುದಾಗಿ ತಿಳಿಸಿದ್ದಾರೆ.
ಮಾದೇಶ್ ಕೂಡಲೇ ಭೋಜೇಗೌಡರಿಗೆ ಕರೆ ಮಾಡಿ ಇನೋವಾ ಕಾರನ್ನು ಮಾರಾಟಕ್ಕೆ ಇಟ್ಟಿದ್ದೀರಾ ಎಂದು ವಿಚಾರಿಸಿದ್ದಾರೆ. ಈ ವೇಳೆ ಭೋಜೇಗೌಡರು ನನ್ನ ಇನೋವಾ ಕಾರು ಮನೆಯಲ್ಲೇ ಇದೆ. ಇದನ್ನು ಮಾರಾಟಕ್ಕೆ ಇಟ್ಟಿಲ್ಲ ಎಂದು ತಿಳಿಸಿದ್ದಾರೆ.
ಇದಾದ ಬಳಿಕ ಕೂಡಲೇ ಮಾದೇಶ್ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ ಪೊಲೀಸರು ಕಾರಿನ ಸಮೇತ ಶೋರೂಂ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.










