ಕರ್ನಾಟಕ ಸೇರುತ್ತೇವೆ ಎಂದಿದ್ದ ಉಡುಗಿ ಗ್ರಾಮದ 17 ಜನರಿಗೆ ನೋಟಿಸ್…

22
firstsuddi

ಬೆಳಗಾವಿ : ಕರ್ನಾಟಕ ಸೇರಲು ನಿರ್ಧಾರ ಮಾಡಿದ ಉಡುಗಿ ಗ್ರಾಮದ 17 ಜನರಿಗೆ ಮಹಾರಾಷ್ಟ್ರದ ಅಕ್ಕಲಕೋಟೆ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸೇರ್ಪಡೆಗೆ ಠರಾವು ಪಾಸ್ ಮಾಡಿದ್ದ ಉಡುಗಿ ಗ್ರಾಮದ ಜನರು ಗ್ರಾಮದಲ್ಲಿ ಕನ್ನಡ ಧ್ವಜ ಹಾರಿಸಿ ಕನ್ನಡ ಪರ ಘೋಷಣೆ ಕೂಗಿದ್ದರು. ಆದ್ರೆ ಕರ್ನಾಟಕ ಸೇರಬೇಕೆನ್ನುವ ಕನ್ನಡಿಗರ ಧ್ವನಿ ಅಡಗಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ಸೇರ ಬಯಸುವ ಹೋರಾಟ ನಡೆಸೋ ಮುನ್ನ ಪೊಲೀಸರ ಗಮನಕ್ಕೆ ತರಬೇಕೆಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಸಂಬಂಧ ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಮುಂದುವರೆದಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 21 ಕಡೆ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಕೊಗನೋಳ್ಳಿ ಚೆಕ್ ಪೋಸ್ಟ್ ನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. 5 ಡಿಎಆರ್ ತುಕಡಿ ಸೇರಿ 450ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಇನ್ನೂ ಕರವೇ ಕಾರ್ಯಕರ್ತರು ನಾಡದ್ರೋಹಿ ಎಂಇಎಸ್, ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಇಂದು ಬೃಹತ್ ಬಹಿರಂಗ ಸಭೆ ನಡೆಸಲಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಇಬ್ಬರು ಡಿಸಿಪಿ, ನಾಲ್ವರು ಸಿಪಿಐ, 10 ಪಿಎಸ್ ಐ, 12 ಕೆಎಸ್ ಆರ್ ಪಿ, 8 ಸಿಎಆರ್ ತುಕಡಿ, ಅಶ್ರುವಾಯು ಪ್ರಯೋಗಿಸುವ ವರುಣಾ ವಾಹನ ನಿಯೋಜನೆಗೊಂಡಿದೆ.