ಕಳಸ : ಗ್ರಾ.ಪಂ ಅಧ್ಯಕ್ಷರಾಗಿ ಸುಜಯ ಸದಾನಂದ ಉಪಾಧ್ಯಕ್ಷರಾಗಿ ಹೇಮಾ ಅವರು ಆಯ್ಕೆ…

141
First suddi

ಕಳಸ : ತಾಲ್ಲೂಕಿನ ತೀವ್ರ ಕುತೂಹಲ ಕೆರಳಿಸಿದ್ದ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದ್ದು, ಅಧ್ಯಕ್ಷರಾಗಿ ಸುಜಯ ಸದಾನಂದ ಉಪಾಧ್ಯಕ್ಷರಾಗಿ ಹೇಮಾ ಅವರು ಆಯ್ಕೆಯಾಗಿದ್ದಾರೆ.
29 ಸದಸ್ಯರನ್ನು ಒಳಗೊಂಡಿರುವ ಕಳಸ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ 14 ಸ್ಥಾನ ಬಿಜೆಪಿ ಬೆಂಬಲಿತ, 13 ಜೆಡಿಎಸ್ ಬೆಂಬಲಿತ, 2 ಕಾಂಗ್ರೆಸ್ ಬೆಂಬಲಿತರು ಚುನಾಯಿತರಾಗಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯೆ ಹೇಮಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸುಜಯ ಸದಾನಂದ ಅಧ್ಯಕ್ಷ ಸ್ಥಾನಕ್ಕೆ, ಹೇಮಾ ಉಪಾಧ್ಯಕ್ಷ ಸ್ಥಾನಕ್ಕೆ, ಜೆಡಿಎಸ್ ನಿಂದ ಜಮೀಲಾ ಅಧ್ಯಕ್ಷ ಸ್ಥಾನಕ್ಕೆ, ರತೀ ರವೀಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಅಂತಿಮವಾಗಿ ಬಿಜೆಪಿ ಬೆಂಬಲಿತ ಅಧ್ಯಕ್ಷೆಯಾಗಿ ಸುಜಯ ಸದಾನಂದ, ಉಪಾಧ್ಯಕ್ಷೆಯಾಗಿ ಹೇಮಾ ಕಾಂಗ್ರೆಸ್ ಬೆಂಬಲಿತರ ಎರಡು ಮತಗಳನ್ನು ಸೇರಿ ತಲಾ 17 ಮತಗಳನ್ನು ಪಡೆದು ಜಯಗಳಿಸಿದರು.
ನಂತರ ನಡೆದ ಅಭಿನಂದನಾ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ರವೀಂದ್ರ, ಮಾಜಿ ಅಧ್ಯಕ್ಷ ಕೆಸಿ.ರತನ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜನ್ನಾಪುರ ರಘು, ಉಪಾಧ್ಯಕ್ಷ ಹೆಮ್ಮಕ್ಕಿ ಗಿರೀಶ್, ಕಳಸ ಅಧ್ಯಕ್ಷ ನಾಗಭೂಷಣ್, ಮುಖಂಡ ಎಂ.ಎ.ಶೇಷಗಿರಿ, ನಾಗೇಶ್ ಹೆಬ್ಬಾರ್, ರಂಗನಾಥ್, ಜಯಂತ್ ಇತರರು ಇದ್ದರು.
ಕಳಸ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಹಿನ್ನಲೆಯಲ್ಲಿ ಅಹಿತಕರ ಘಟನೆ ನಡೆಯುವ ಮನ್ಸೂಚನೆ ಮೇರೆಗೆ ಪಂಚಾಯಿತಿ ಆವರಣದಲ್ಲಿ 50ಕ್ಕೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಪಂಚಾಯಿತಿ ಕಟ್ಟಡದಲ್ಲಿದ್ದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು.