ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಿರಿ ನೋಡೋಣ : ಕಾಂಗ್ರೆಸ್​​ಗೆ ಬೊಮ್ಮಾಯಿ‌ ಸವಾಲು…

69
firstsuddi

ಬೆಂಗಳೂರು : ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ದೊಡ್ಡಬಳ್ಳಾಪುರದಿಂದ ಶುರುವಾದ ಈ ಜನಸ್ಪಂದನ ಇಡೀ ರಾಜ್ಯಾದ್ಯಂತ ಮಾಡಿ, ಜನರ ಮೆಚ್ಚುಗೆ ಗಳಿಸುತ್ತೇವೆ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಇದನ್ನು ನಿಲ್ಲಿಸಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಗೆ ಅಧಿಕಾರ ಲಾಲಸೆ ಇದೆ. ಹೀಗಾಗಿ ಈ ಹಿಂದೆ ಕುತಂತ್ರದಿಂದ ಸಿದ್ದರಾಮಯ್ಯ ಮೈತ್ರಿ ಸರ್ಕಾರ ರಚನೆ ಮಾಡಿದ್ರು. ಜೆಡಿಎಸ್ ಪಕ್ಷವನ್ನು ಬೈಕೊಂಡು ಓಡಿದಾದ ಸಿದ್ದರಾಮಯ್ಯ ನವರೇ ಎಲ್ಲಿ ಹೋಯ್ತ್ರೀ, ನಿಮ್ಮ ನೀತಿ ಹಾಗೂ, ನೈತಿಕತೆ. ಯಾರಿಗೆ ಉಪದೇಶ ಹೇಳ್ತೀರಿ ನೀವು, ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಸಿಎಂ ಕಿಡಿಕಾರಿದರು.

ಕಾಂಗ್ರೆಸ್ಸಿನವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರದ್ದು 100% ಸರ್ಕಾರವಾಗಿದೆ. ಕೆಲಸ ಮಾಡದೇ ಬಿಲ್ ಪಡೆಯುವ ಪಕ್ಷ ಕಾಂಗ್ರೆಸ್ ನಾಗಿದೆ. ಕಾಂಗ್ರೆಸ್ ಕಾಲದಲ್ಲಿ ಲ್ಯಾಪ್ ಟಾಪ್ ಹಗರಣ ಆಯ್ತು, ಹಾಸಿಗೆ ದಿಂಬು ಹಗರಣ ಆಯ್ತು. ಪಿಎಸ್ ಐ ನೇಮಕಾತಿಯಲ್ಲೂ ಅಕ್ರಮ ಆಯ್ತು. ಹೀಗೆ ಹೇಳುತ್ತಾ ಹೋದರೆ ಕಾಂಗ್ರೆಸ್ ಅಕ್ರಮ ಬೇಕಾದಷ್ಟಿದೆ. ಕಾಂಗ್ರೆಸ್ ನ ದುಷ್ಟ ಕೂಟದ ನಾಟಕಕ್ಕೆ ಅಂತ್ಯ ಹಾಡಬೇಕಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ರೆ ಜನರನ್ನು ನರಕಕ್ಕೆ ತಳ್ಳುತ್ತಿದ್ರು. ಅನ್ನಭಾಗ್ಯ ಕೊಟ್ಟೆ ಅಂತಾ ಹೇಳ್ತೀರಲ್ಲ. ಅಕ್ಕಿ ಕೊಟ್ಟವರು ನೀವಾ ಎಂದ ಬೊಮ್ಮಾಯಿ, ಕೇಂದ್ರ ಸರ್ಕಾರ ಕೊಡುವ ಅಕ್ಕಿಗೆ ನೀವು ಚೀಲ ಮಾತ್ರ ಕೊಟ್ಟಿದ್ದೀರಿ ಎಂದು ಬೊಮ್ಮಾಯಿ ಟಾಂಗ್ ಕೊಟ್ಟರು.

ಕಾಂಗ್ರೆಸ್ ನವರ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ನಾವು ಎಲ್ಲ ರಂಗದಲ್ಲೂ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾಂಗ್ರೆಸ್ಸಿನವರ ಕನಸು ಕನಸಾಗಿಯೇ ಉಳಿಯುತ್ತದೆ. ಜನ ಕಾಂಗ್ರೆಸ್ಸಿಗರ ಭ್ರಷ್ಟಾಚಾರ ನೋಡಿದ್ದಾರೆ. ಮತ್ತೆ ಕಾಂಗ್ರೆಸ್ ಬರಲು ಅವಕಾಶ ಕೊಡಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ಸಿನವರಿಗೆ ಎತ್ತಿನಹೊಳೆ ಯೋಜನೆ ಬಗ್ಗೆ ಗೊತ್ತಿಲ್ಲ. ಎತ್ತಿನ ಹೊಳೆ ಎಲ್ಲಿದೆ ಅಂತ ಅವರಿಗೆ ಗೊತ್ತಿಲ್ಲ. ಯೋಜನೆ ಆರಂಭಿಸಿದವರು ಯಡಿಯೂರಪ್ಪನವರಾಗಿದ್ದು, ಇಲ್ಲೇ ಬಂದು ಕಾಂಗ್ರೆಸ್ ನಾಯಕರು ಎತ್ತಿನ ಹೊಳೆ ಆಗಲ್ಲ ಎಂದಿದ್ದರು. ಈಗ ಯೋಜನೆ ನಮ್ದು ಎನ್ನುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ಇದೇ ವರ್ಷ ಪೂರ್ತಿ ಮಾಡುತ್ತೇವೆ. ಇದೇ ವರ್ಷ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು.

2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದೊಂದು ದಾಖಲೆಯ ಸಮಾವೇಶವಾಗಿದೆ. ಈ ಸಮಾವೇಶ ನನಗೆ ಇನ್ನಷ್ಟು ಶಕ್ತಿ ಕೊಟ್ಟಿದೆ. ಸುಧಾಕರ್, ಮುನಿರತ್ನ, ಎಂಟಿಬಿಗೆ ಧನ್ಯವಾದ. ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿಸಿ ಸಾಧನೆ ಮಾಡಿದ್ದಾರೆ ಇದಕ್ಕೆ ಸಹಕರಿಸಿದ ಕಾರ್ಯಕರ್ತರಿಗೆ ಎಲ್ಲರಿಗೂ ಕೃತಜ್ಞತೆ ಹೇಳಿದರು.