ಬೆಂಗಳೂರು: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು’ ಬಿಟ್ಟು ದಲಿತರೊಬ್ಬರು ಸಿಎಂ ಆಗಲು ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡಾ ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ಅವರು, 3 ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ಇನ್ನೂ ಸಮಯವಿದೆ. ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ ರಾಜೀನಾಮೆ ನೀಡಿ ದಲಿತರೊಬ್ಬರು ಸಿಎಂ ಆಗವ ಹಾದಿಯನ್ನು ಸುಗಮಗೊಳಿಸಿಕೊಡಿ. ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದುಸ ಹಾಗೂ ರಾಜಕೀಯ ಷಡ್ಯಂತ್ರ ಮಾಡುವುದನ್ನು ಬಿಡಿ. ದೇಶದ ಜನರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು. ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ಅವರನ್ನು ರಾಜಕೀಯವಾಗಿ ಸಾಮಾಜಿಕವಾಗಿ ತುಳಿದ ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ. ಅಂಬೇಡ್ಕರ್ ಅವರ ನಿಧನದ ನಂತರ ಅವರ ಪಾರ್ಥಿವ ಶರೀರ ಮಣ್ಣು ಮಾಡಲು ದೆಹಲಿಯಲ್ಲಿ ಕನಿಷ್ಠ ಅಡಿಯ ಜಾಗವನ್ನು ನೀಡದೆ ಮುಂಬೈಗೆ ಅವರ ದೇಹ ಸಾಗಿಸುವ ವ್ಯವಸ್ಥೆಯನ್ನೂ ಮಾಡದೆ ಅವರನ್ನು ತಾತ್ಸಾರವಾಗಿ ನೋಡಿಕೊಂಡ ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್ ಅವರ ಇತಿಹಾಸ ಮುಂದಿನ ಭವಿಷ್ಯದೊಂದಿಗೆ ತಿಳಿಯುವಂತೆ ಸಂವಿಧಾನ ದಿನವನ್ನು ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಭಾರತೀಯ ಜನತಾ ಪಾರ್ಟಿ ಎಂದು ಹೇಳಿದರು.










