ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಬರ್ಬರ ಹತ್ಯೆ…

41
firstsuddi

ಬೆಳಗಾವಿ: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ (58) ಎಂಬವರನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಜಿಲ್ಲೆಯ ಅಥಣಿ ತಾಲೂಕಿನ ಖೀಳೆಗಾಂವ್ ಗ್ರಾಮದ ಹೊರವಲಯದಲ್ಲಿ ಅಣ್ಣಪ್ಪ ಬಸಪ್ಪ ನಿಂಬಾಳರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಎರಡು ಬೈಕಿನಲ್ಲಿ ಬಂದ ಆರು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಅಣ್ಣಪ್ಪ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿ ಖೀಳೆಗಾಂವ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಅವರ ಆಪ್ತ ಬಳಗದಲ್ಲಿ ಇವರು ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಹಣಕಾಸಿನ ವಿಚಾರವಾಗಿ ಹತ್ಯೆ ಮಾಡಿರುವ ಶಂಕೆಗಳು ವ್ಯಕ್ತವಾಗಿವೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.