ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ …

46
firstsuddi

ಕೊಡಗು: ಕಾರ್ಯಾಚರಣೆಗೆ ತೆರಳಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿರುವಂತಹ ಘಟನೆ ನಿನ್ನೆ ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ನಡೆದಿದೆ.

ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯ ಸಿಬ್ಬಂದಿ ಗಿರೀಶ್(35) ಮೃತಪಟ್ಟವರು. ಕುಶಾಲನಗರದ ಆರ್​ಆರ್​ಟಿ ಸಿಬ್ಬಂದಿಗಳು ಸೇರಿದಂತೆ ಅರಣ್ಯಾಧಿಕಾರಿಗಳು ಕಾಡಾನೆ ಕಾರ್ಯಾಚರಣೆಗೆ ತೆರಳಿದ್ದರು. ಈ ವೇಳೆ ದೀಢಿರಾಗಿ ಬಂದ ಕಾಡಾನೆ ಏಕಾಏಕಿ ಸಿಬ್ಬಂದಿ ಆರ್​ಆರ್​ಟಿ ಗಿರೀಶ್ ಮೇಲೆ ದಾಳಿ ನಡೆಸಿದೆ. ಓಡಿ ಹೋಗಲು ಯತ್ನಿಸಿದಾಗ ಆಯತಪ್ಪಿ ಬಿದ್ದ ಸಿಬ್ಬಂದಿಯ ಎದೆಭಾಗಕ್ಕೆ ಆನೆ ತುಳಿದಿದೆ. ತೀವ್ರವಾಗಿ ಗಾಯಗೊಂಡ ಗಿರೀಶ್​​ನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತಾದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಕೊನೆಯುಸಿರೆಳೆದಿದ್ದಾರೆ.

ನಿನ್ನೆಯೂ ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಕೆದಕಲ್ ಬಳಿ ಕಾಡಾನೆ ಕಂಡು ಬಂದಿದ್ದು, ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಇದರಿಂದ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಂಟಿಕೊಪ್ಪದಿಂದ ಕೆಲಸಕ್ಕೆಂದು ಡಿ ಬ್ಲಾಕ್ ಬಳಿ ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ನುಗ್ಗಿ ದಾಳಿ ನಡೆಸಿದೆ. ಅಲ್ಲಿಂದ ಪಲಾಯನ ಮಾಡಿದ ಕಾಡಾನೆ, ಹಬೀಬ್ ತೋಟದತ್ತ ತೆರಳುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ನಡೆಸಿದೆ.