ಕಾವೇರಿ ಕಿಚ್ಚು- ಮಂಡ್ಯ, ಮದ್ದೂರ್ ಬಂದ್‍ಗೆ ಉತ್ತಮ ಪ್ರತಿಕ್ರಿಯೆ…

119
firstsuddi

ಮಂಡ್ಯ: ಕಾವೇರಿ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಾಗುತ್ತಿದೆ. ಇಂದು ಮಂಡ್ಯ ಹಾಗೂ ಮದ್ದೂರಿನಲ್ಲಿ ಬಂದ್ ನಡೆಸುತ್ತಿದ್ದು, ಬಂದ್’ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಡ್ಯ ಜಿಲ್ಲಾ ಬಂದ್‍ಗೆ ಕರೆ ನೀಡಿದ ಹಿನ್ನೆಲೆ ಇಂದು ಮಂಡ್ಯ ಹಾಗು ಮದ್ದೂರು ಪಟ್ಟಣ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರು, ಆಟೋ ಚಾಲಕರು, ಖಾಸಗಿ ವಾಹನ ಮಾಲೀಕರು, ಸ್ಟುಡಿಯೋ ಮಾಲೀಕರು, ಜಿಲ್ಲೆಯ ಎಲ್ಲಾ ವರ್ಗದ ಜನತೆ, ವಿದ್ಯಾರ್ಥಿ ಸಮೂಹ, ರೈತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘಟನೆಗಳು ಸ್ವಯಂಪ್ರೇರಿತವಾಗಿ ಬಂದ್‌ನಲ್ಲಿ ಭಾಗವಹಿಸಿ ಉತ್ತಮ ಬೆಂಬಲ ಸೂಚಿಸಿದ್ದು, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಳಿಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಬಂದ್ ಇರಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಎಸ್‍ಪಿ, ಎಎಸ್‍ಪಿ, ಮೂವರು ಡಿವೈಎಸ್‍ಪಿ, ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿ 400 ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಜೊತೆಗೆ 6 ಕೆ.ಎಸ್.ಆರ್.ಪಿ, 5 ಡಿಎಆರ್ ತುಕಡಿ ನಿಯೋಜಿಸಲಾಗಿದೆ.

ಬೆಳಗ್ಗೆ 8ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದ್ದು, ಮತ್ತೊಂದು ತಂಡದಿಂದ ನಗರದ ಹಲವು ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಬೆಂಬಲಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಲಿದ್ದಾರೆ.

10 ಗಂಟೆಗೆ ಸಂಜಯ್ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತದೆ. ಮದ್ದೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ. ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್ ರ್ಯಾಲಿ, ಬಳಿಕ ಮದ್ದೂರಿನ ಕೊಲ್ಲಿ ಸರ್ಕಲ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.