ಮಂಗಳೂರು : ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳ ಚುಂಬನದ ವಿಡಿಯೋಗಳು ವೈರಲ್ ಆಗಿರುವ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ 8 ವಿದ್ಯಾರ್ಥಿಗಳ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ.
ಬಾವುಟಗುಡ್ಡೆಯ ರೂಂನಲ್ಲಿ ವಿದ್ಯಾರ್ಥಿನಿಯರ ಜೊತೆ ಕಿಸ್ಸಿಂಗ್ ಪಂದ್ಯ ಮಾಡಿದ್ದ ವಿದ್ಯಾರ್ಥಿಗಳು, ಕಿಸ್ ನೀಡುವ ವೀಡಿಯೋವನ್ನೆಷ್ಟೇ ಅಲ್ಲದೇ ದೈಹಿಕ ಸಂಪರ್ಕದ ವಿಡಿಯೋಗಳು ತನಿಖೆ ವೇಳೆ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಲಿಪ್ ಲಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಈ ಘಟನೆಯು ನಾಲ್ಕೈದು ತಿಂಗಳ ಹಿಂದೆ ನಡೆದಿದೆ. ಬಾವುಟಗುಡ್ಡೆಯಲ್ಲಿ ಅಪಾರ್ಟ್ ಮೆಂಟ್ ವೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳು ರೂಮ್ ಮಾಡಿಕೊಂಡಿದ್ದು, ಅಲ್ಲಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಟ್ರುತ್ ಆ್ಯಂಡ್ ಡೇರ್ ಗೇಮ್ ಆಡಿದ್ದಾರೆ. ಅದರ ಭಾಗವಾಗಿ ಈ ಪ್ರಕರಣ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯ ವಿಡಿಯೋವನ್ನು ಕಳೆದೊಂದು ವಾರದ ಹಿಂದೆ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್ ನ ವಾಟ್ಸ್ ಆ್ಯಪ್ ಗ್ರೂಪ್ ವೊಂದಕ್ಕೆ ಹಾಕಿದ್ದ. ಆ ಬಳಿಕ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳನ್ನು ಅಮಾನತು ಮಾಡಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿರುವುದರಿಂದ ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.










