ರಾಯಚೂರು: ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಚಿಕ್ಕ ಉಪ್ಪೇರಿಯಲ್ಲಿ ನಡೆದಿದೆ.
ಸುನೀತಾ (28) ಮೃತ ಮಹಿಳೆ. ಬಸವರಾಜ್ ಕೊಲೆಗೈದ ಪತಿ. 2015ರಲ್ಲಿ ಪರಸ್ಪರ ಪ್ರೀತಿಸಿ ಲಿಂಗಸಗೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳು, ಮದುವೆಯಾಗಿ ಕೆಲ ದಿನಗಳ ಕಾಲ ಮಾತ್ರ ಸುಖಸಂಸಾರ ನಡೆಸಿದ್ದಾರೆ. ಕುಡಿತದ ಚಟಕ್ಕೆ ದಾಸನಾಗಿದ್ದ ಆರೋಪಿ ಬಸವರಾಜ್, ಕುಡಿದು ಬಂದು ದಿನನಿತ್ಯ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಕುಡಿಯುವುದಕ್ಕೆ ಹಣ ನೀಡುವಂತೆ ಪೀಡಿಸುತ್ತಿದ್ದ.
ನಿನ್ನೆ ಸಂಜೆ ಜಮೀನಿನಲ್ಲಿ ನೀರು ಬಿಡುವಾಗ ಇಬ್ಬರ ನಡುವೆ ಗಲಾಟೆ ಆಗಿದೆ. ಆಗ ಪತಿ ಬಸವರಾಜ್ ಕುಡಿಯುವುದಕ್ಕೆ ಹಣ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ಆಗ ಹಣ ಕೊಡದಿದ್ದಕ್ಕೆ ಸಲಾಕೆಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಲಾಗಿದೆ.
ಸದ್ಯ ಪ್ರಕರಣ ಸಂಬಂಧ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










