ಹುಬ್ಬಳ್ಳಿ: ಕೆಲಸ ಮಾಡಲು ಹೋಗು ಎಂದಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಳೇಹುಬ್ಬಳ್ಳಿ ಇಸ್ಲಾಂಪುರದಲ್ಲಿ ನಡೆದಿದೆ.
ಸಾಹಿಸ್ತಾ ಬೇಪಾರಿ(25) ಕೊಲೆಯಾಗಿದ್ದು, ಅವಳ ಪತಿ ಮಲ್ಲಿಕ್ (28) ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಮಲ್ಲಿಕ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಅವನು ಕೆಲಸಕ್ಕೆ ಹೋಗದ ಕಾರಣ ದಂಪತಿಗಳಿಬ್ಬರ ನಡುವೆ ಜಗಳ ನಡೆಯುತ್ತಿತ್ತು.
ನಿನ್ನೆಯೂ ಸಹ ಇದೇ ವಿಚಾರವಾಗಿ ಜಗಳ ಪ್ರಾರಂಭವಾಗಿ ವಿಕೋಪಕ್ಕೆ ಹೋಗಿ ಮಲ್ಲಿಕ್ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಲ್ಲದೇ ತಾನೂ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಸಬಾಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಕಿಮ್ಸ್ ಶವಗಾರಕ್ಕೆ ರವಾನಿಸಿದರು.










