ಕೇಂದ್ರ ಸರ್ಕಾರಕ್ಕೆ ಸೇರಿದ ಮೂರು ಸಂಸ್ಥೆಗಳಿಂದ ಅಕ್ಕಿ ಪಡೆಯುವುದಕ್ಕೆ ಮುಂದಾದ ಸಿಎಂ ಸಿದ್ದು!

53
firstsuddi

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ‘ಅನ್ನಭಾಗ್ಯ ಯೋಜನೆ’ ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದು, ಕೇಂದ್ರ ಸರ್ಕಾರದ ಅಸಹಕಾರದ ನಡುವೆ ಯೋಜನೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (ಎನ್ ಸಿ ಸಿಎಫ್), ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್) ಹಾಗೂ ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಭಾರತ ಸರ್ಕಾರಕ್ಕೆ ಸೇರಿದೆ. ಈ ಮೂರು ಸಂಸ್ಥೆಗಳಿಂದ ಅಕ್ಕಿ ಪಡೆಯುವುದಕ್ಕೆ ದರಪಟ್ಟಿ ಕರೆಯಲು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಿಎಂ ತಿಳಿಸಿದರು.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಭಾರತೀಯ ಆಹಾರ ಮಂಡಳಿ(ಎಫ್ ಸಿ ಐ) ನಿಂದ 34 ರೂ. ಅಕ್ಕಿ , 2.60 ರೂ. ಸಾಗಾಣಿಕೆ ವೆಚ್ಚ ಸೇರಿ ಒಂದು ಕೆ.ಜಿ. ಅಕ್ಕಿಗೆ ಒಟ್ಟು 36.40 ರೂ. ವೆಚ್ಚ ತಗಲುತ್ತದೆ. ಈ ಮೂರು ಸಂಸ್ಥೆಗಳು ನಮೂದಿಸುವ ದರ, ಸರಬರಾಜು ಮಾಡುವ ಪ್ರಮಾಣಗಳ ವಿವರ ಪಡೆಯಲಾಗುವುದು . ಟೆಂಡರ್ ಮೂಲಕ ಅಕ್ಕಿ ಪಡೆಯಲೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲು ಒಂದು ತಿಂಗಳಿಗೆ 840 ಕೋಟಿ ರೂ. ವೆಚ್ಚ ತಗಲುತ್ತದೆ. ವರ್ಷಕ್ಕೆ 10,092 ಕೋಟಿ ವೆಚ್ಚವಾಗಲಿದೆ. ಸರ್ಕಾರ ಈ ವೆಚ್ಚವನ್ನು ಭರಿಸಿ ಅಕ್ಕಿಯನ್ನು ವಿತರಿಸಲು ಸಿದ್ಧವಿದೆ. ಅಕ್ಕಿಯ ದಾಸ್ತಾನು ಲಭ್ಯವಿದ್ದರೂ ಕೇಂದ್ರ ಸರ್ಕಾರದವರು ಅಕ್ಕಿ ನೀಡಲು ಒಪ್ಪುತ್ತಿಲ್ಲ ಎಂದರು. ರಾಜ್ಯ ಬಿಜೆಪಿ ಪಕ್ಷದವರು ರಾಜ್ಯದ ಬಡವರಿಗೆ ಅನುಕೂಲವಾಗಲು ಅಕ್ಕಿಯನ್ನು ವಿತರಿಸುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಬಹುದಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ರಾಗಿ, ಜೋಳವನ್ನು 6 ತಿಂಗಳವರೆಗೆ ತಲಾ 2 ಕೆಜಿ ಕೊಡುವಷ್ಟು ಮಾತ್ರ ದಾಸ್ತಾನು ಲಭ್ಯವಿದೆ. ಹಳೇ ಮೈಸೂರು ಭಾಗದ ಜನರಿಗೆ 2 ಕೆಜಿ ರಾಗಿ ಹಾಗೂ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗದ ಜನರಿಗೆ 2 ಕೆಜಿ ಜೋಳ ನೀಡಬಹುದು. ಇನ್ನುಳಿದ 3 ಕೆಜಿ ಅಕ್ಕಿಯನ್ನು ರಾಜ್ಯದ ಜನರಿಗೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಪಂಜಾಬ್ ಸರ್ಕಾರ, ಕರ್ನಾಟಕಕ್ಕೆ ಅಕ್ಕಿ ಸರಬರಾಜು ಮಾಡಲು ಸಿದ್ದವಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಪಂಜಾಬ್ ನಿಂದ ಅಕ್ಕಿ ಖರೀದಿ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚರ್ಚಿಸಿದ್ದಾರೆ. ರಾಜ್ಯ ತಿಳಿಸುವ ದರಕ್ಕೆ ಅಕ್ಕಿ ನೀಡಲು ಪಂಜಾಬ್ ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದರು.

ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಅಕ್ಕಿ ಪಡೆಯುವವರೆಗೆ ಸರ್ಕಾರದ ಬಳಿ ಸಮಯವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ, ಜುಲೈ 1 ರಿಂದ ರಾಜ್ಯದ ಜನರಿಗೆ ಅಕ್ಕಿಯನ್ನು ನೀಡಲು ಸರ್ಕಾರ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದಲ್ಲಿ ಅಕ್ಕಿಯ ದಾಸ್ತಾನು ಲಭ್ಯವಿದ್ದು, ಅವರು ರಾಜ್ಯಕ್ಕೆ ಅಕ್ಕಿ ನೀಡಲು ಮನಸ್ಸು ಮಾಡಬೇಕಿದೆ. ಎಂಎಸ್ ಪಿ ಮೂಲಕ ಅಕ್ಕಿ ಖರೀದಿಸಬೇಕಾಗಿದೆ. ಬಡವರಿಗೆ ಅಕ್ಕಿ ನೀಡುವ ವಿಷಯದಲ್ಲಿ ಯಾರೇ ಎಷ್ಟೇ ರಾಜಕಾರಣ ಮಾಡಿದರೂ , ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಖಂಡಿತವಾಗಿಯೂ ಜಾರಿಗೊಳಿಸಲಿದೆ ಎಂದು ತಿಳಿಸಿದರು.