ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಎಎಪಿ ಪ್ರತಿಭಟನೆ…

75
firstsuddi

ಚಿಕ್ಕಮಗಳೂರು : ಜನಸಾಮಾನ್ಯರ ಆಹಾರ ಪದಾರ್ಥಗಳ ಮೇಲೆ ನೀತಿ ನಿಯಮವಿಲ್ಲದೇ ಕೇಂದ್ರ ಸರ್ಕಾರ ಏರಿಸುತ್ತಿರುವ ಬೆಲೆಏರಿಕೆಯನ್ನು ಖಂಡಿಸಿ ಜಿಲ್ಲಾ ಆಮ್‍ ಆದ್ಮಿ ಪಕ್ಷದ ವತಿಯಿಂದ ನಗರದ ಆಜಾದ್‍ಪಾರ್ಕ್‍ನಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಾ|| ಕೆ.ಸುಂದರಗೌಡ ಕೇಂದ್ರ ಸರ್ಕಾರ ಇದೇ ರೀತಿ ಜನಸಾಮಾನ್ಯರ ತೆರಿಗೆ ಮೂಲಕ ಪೀಡಿಸಿದ್ದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸರ್ಕಾರದ ವಿರುದ್ಧ ಧ್ವನಿಎತ್ತುವುದು ಅನಿವಾರ್ಯಯುಂಟಾಗುತ್ತದೆ ಎಂದು ಎಚ್ಚರಿಸಿದರು.

ದೇಶದ ಪ್ರಧಾನಮಂತ್ರಿಗಳು ಕುಟುಂಬ ಜೀವನದ ಅನುಭವ ಇಲ್ಲದವರು. ಬಿಜೆಪಿ ಸರ್ಕಾರವು ಜನಸಾಮಾನ್ಯರನ್ನು ಬೀದಿಗೆ ಎಳೆಯುವ ನೀತಿಯನ್ನು ಖಂಡಿಸುವುದಾಗಿ ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಉಸಿರಾಡುವ ಗಾಳಿ ಹಾಗೂ ಮಲಮೂತ್ರ ವಿಸರ್ಜನೆಗೂ ಜಿಎಸ್‍ಟಿ ಹೊರೆ ಹೊರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ, ಸಂವಿಧಾನವನ್ನು ಹಾಗೂ ಮಾನವ ಹಕ್ಕುಗಳನ್ನು ಕೂಡಾ ಕ್ಷೀಣಿಸಿ ಮೂಲೆಗುಂಪು ಮಾಡಿ ಜನತೆಯ ಮೇಲೆ ತೆರಿಗೆಯನ್ನು ಹೊರಿಸುವ ಮೂಲಕ ಭ್ರಷ್ಟಚಾರವೆಸಗುತ್ತಿರುವ ಬಿಜೆಪಿ ಸರ್ಕಾರ ಈ ಕ್ಷಣದಿಂದಲೇ ಜಿಎಸ್‍ಟಿ ಬೆಲೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರನ್ನು ಸಿಂಗಾಪುರಕ್ಕೆ ಕಾರ್ಯಕ್ರಮಕ್ಕೆ ಆಹ್ವಾನ ವಿದ್ದರೂ ಬಿಜೆಪಿ ಸರ್ಕಾರವು ಅವರಿಗೆ ಅನುಮತಿಯನ್ನು ನೀಡದೇ ಅವಮಾನ ಮಾಡಿರುವುದನ್ನು ಜಿಲ್ಲಾ ಆಮ್‍ಆದ್ಮಿ ಪಕ್ಷವು ಖಂಡಿಸಿದ್ದು ಕ್ರೇಜಿವಾಲ್ ಅವರಿಗೆ ಸಿಂಗಾಪುರ ಕಾರ್ಯಕ್ರಮಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನಂತರ ಪಕ್ಷದ ಎಲ್ಲಾ ಮುಖಂಡರುಗಳು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಮೋಹನ್, ಸೈಯದ್ ಜಮೀಲ್‍ಅಹ್ಮದ್, ಎಂ.ಪಿ. ಈರೇಗೌಡ, ಪವನ್, ಹೇಮಂತ್, ವಿಲಿಯಂ ಪಿರೇರಾ, ಯೂಸೂಫ್, ರವಿಕುಮಾರ್ ಹಾಜರಿದ್ದರು.