ನವದೆಹಲಿ: 2025ರ ಬೇಸಿಗೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಭಾರತ, ಚೀನ ಒಪ್ಪಿಕೊಂಡಿದೆ. 2020ರ ನಂತರ ನಿಲ್ಲಿಸಲಾಗಿದ್ದ ಈ ಯಾತ್ರೆಯನ್ನು ಪುನರಾರಂಭಿಸಲು ಭಾರತ ಮತ್ತು ಚೀನ ಒಪ್ಪಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಕೊರೋನಾ ವೈರಸ್ ಮತ್ತು ನಂತರದ ರಾಜಕೀಯ ಉದ್ವಿಗ್ನತೆಗಳಿಂದಾಗಿ ಸ್ಥಗಿತವಾಗಿದ್ದ ನೇರವಿಮಾನ ಸೇವೆಗಳನ್ನು 5 ವರ್ಷಗಳ ಬಳಿಕ ಪುನರಾರಂಭಕ್ಕೆ ಭಾರತ ಮತ್ತು ಚೀನಾ ಎರಡೂ ದೇಶಗಳು ಒಪ್ಪಿಗೆ ನೀಡಿವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಬೀಜಿಂಗ್ ನಲ್ಲಿ ಚೀನಾದ ವಿದೇಶಾಂಗ ಕಾರ್ಯದರ್ಶಿ, ಉಪ ವಿದೇಶಾಂಗ ಸಚಿವರ ಜತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಹಾಲಿ ಇರುವ ಒಪ್ಪಂದಗಳ ಅನ್ವಯ ಇದಕ್ಕೆ ಅಗತ್ಯವಾಗಿರುವ ಸೂಕ್ತ ವ್ಯವಸ್ಥೆಯನ್ನು ಚರ್ಚಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಜತೆಗೆ ಉಭಯ ದೇಶಗಳ ನಡುವೆ ನೇರ ವಿಮಾನಗಳನ್ನು ಪುನರಾರಂಭಿಸುವ ಬಗ್ಗೆಯೂ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.










