ಬೆಳಗಾವಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದು, ಬಾಣಂತಿಯರಿಗೆ ಬಿಮ್ಸ್ ಆಸ್ಪತ್ರೆ ಅಕ್ಷರಶಃ ಮೃತ್ಯು ಮನೆಯಾಗಿ ಪರಿವರ್ತನೆಯಾಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ. ಅಂಜಲಿ ಪಾಟೀಲ್ ಎಂಬ ಬಾಣಂತಿ ಮೃತಪಟ್ಟಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಸಿಜೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್ ಇವರು ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದವರಾಗಿದ್ದಾರೆ. ಹೆಣ್ಣು ಮಗು ಆರೋಗ್ಯವಾಗಿದ್ದು, ಮಹಿಳೆ ಮೃತಪಟ್ಟಿದ್ದಾರೆ. ನಾರ್ಮಲ್ ಹೆರಿಗೆ ಆಗುತ್ತದೆ ಎಂದು ವೈದ್ಯರು ಮೊದಲು ಹೇಳಿದ್ದರು. ಆಮೇಲೆ ಸಿಜೇರಿಯನ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿಲ್ಲ. ಅಂಜಲಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ಆಸ್ಪತ್ರೆ ಮುಂದೆ ಮೃತ ಅಂಜಲಿ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಾಣಂತಿ ಅಂಜಲಿ ಪಾಟೀಲ್ ಶವ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.










