ಬೆಂಗಳೂರು : ಡಿ.ಜೆ ಹಳ್ಳಿ ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ತಲೆಮರಿಸಿಕೊಂಡಿದ್ದ ಸಂಪತ್ ರಾಜ್ ಅವರ ಬಂಧನಕ್ಕಾಗಿ ಸಿಸಿಬಿ ಅಧಿಕಾರಿಗಳು 5 ತಂಡಗಳನ್ನು ರಚಿಸಿ ಬೆಂಗಳೂರು ಸೇರಿದಂತೆ ಹೊರ ರಾಜ್ಯದಲ್ಲೂ ಹುಡುಕಾಟ ನಡೆಸಿದ್ದರು. ಆದರೆ ದಿನಕ್ಕೊಂದು ಜಾಗ ಬದಲಾಯಿಸುತ್ತಿದ್ದ ಸಂಪತ್ ರಾಜ್ ಅವರು ಎಲ್ಲಿ ಅವಿತಿದ್ದಾರೆ ಎಂಬುವುದು ತಿಳಿಯುತ್ತಿರಲಿಲ್ಲ. ಇಂದು ಬೆಳಿಗ್ಗೆ ಸಂಪತ್ ರಾಜ್ ಆಪ್ತ ರಿಯಾಜುದ್ದೀನ್ ಅವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಸಂಪತ್ ರಾಜ್ ಬಗ್ಗೆ ನೀಡಿದ ಸುಳಿವನ್ನು ಆಧರಿಸಿ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಸಂಪತ್ ರಾಜ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.










