ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಮಹಾಮಾರಿ ಕೊರೊನಾ ವೈರಸ್ನ ಸ್ಪೋಟವಾಗುತ್ತಿದ್ದರೆ ಮತ್ತೊಂದೆಡೆ ರಾಜ್ಯ ರಾಜಕೀಯದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಕಳೆದ 2-3 ತಿಂಗಳಿನಿಂದ ಕೊರೊನಾ ವೈರಸ್ ಭೀತಿಯಿಂದ ತಣ್ಣಗಿದ್ದ ರಾಜ್ಯ ರಾಜಕೀಯದಲ್ಲಿ ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಬಿಜೆಪಿ ಪಕ್ಷದೊಳಗಿನ ಭಿನ್ನಮತ ಈಗಾ ಸ್ಪೋಟಗೊಂಡಿದೆ. ಸರ್ಕಾರ ರಚನೆಯಾದ ಆರಂಭದಿಂದಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಶಾಸಕರು ಸೇರಿ ಸಭೆಯನ್ನು ನಡೆಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕ ಮೂಲದ ಬಿಜೆಪಿ ನಾಯಕರೇ ಮುಳುವಾಗುತ್ತಾರ ಎಂಬ ಅನುಮಾನ ಮೂಡಿದೆ.
ಈ ನಡುವೆ ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಚುನಾವಣೆಯಲ್ಲಿ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡಿಸಲು ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಕತ್ತಿ ಬ್ರದರ್ಸ್ ಮುಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಮೇಶ್ ಕತ್ತಿ ಅವರಿಗೆ ಬೇಕಾದರೆ ಸಚಿವ ಸ್ಥಾನ ನೀಡುತ್ತೇನೆ. ಆದರೆ ರಮೇಶ್ ಕತ್ತಿ ಅವರಿಗೆ ರಾಜ್ಯ ಸಭೆಗೆ ಟಿಕೆಟ್ ನೀಡುವುದಿಲ್ಲ ಎಂದು ಪ್ರಸ್ತಾವನೆಯನ್ನು ಇಟ್ಟಿದ್ದು, ಈ ಪ್ರಸ್ತಾವನೆಯಿಂದ ಕತ್ತಿ ಬ್ರದರ್ಸ್ ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.










