ಬೆಂಗಳೂರು : ಐಪಿಎಸ್ ಅಧಿಕಾರಿ ರೂಪಾ, ಐಎಎಸ್ ಅಧಿಕಾರಿ ರೋಹಿಣಿ ಜಟಾಪಟಿ ಮುಂದುವರಿಯುತ್ತಲೇ ಇದೆ. ಇದೀಗ ರೋಹಿಣಿ ಸಿಂಧೂರಿ ರೂಪಾ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿನ ಬಾಗಲಗುಂಟೆಯ ಪೊಲೀಸ್ ಠಾಣೆಯಲ್ಲಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ರೂಪಾ ವಿರುದ್ಧ ದೂರು ನೀಡಿದ್ದರು. ಆದರೆ ಆಗ ಎಫ್ಐಆರ್ ದಾಖಲಾಗಿರಲಿಲ್ಲ. ಇದೀಗ ನಿನ್ನೆ ರೋಹಿಣಿ ಸಿಂಧೂರಿಯವರು ಕೋರ್ಟ್ ಮೆಟ್ಟಿಲೇರಿದ್ದು ಅವರ ಪರ ವಕೀಲರು ರೂಪಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ರೂಪಾ ಐಪಿಎಸ್ ಅಧಿಕಾರಿ ಆಗಿದ್ರೂ ಮಹಿಳೆಯ ಗೌರವಕ್ಕೆ ಧಕ್ಕೆಯಾಗುವಂತೆ ವೈಯಕ್ತಿಕ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕಿದ್ದಾರೆ. ಅವರ ವಿರುದ್ಧ ನಿರ್ಬಂಧಾಜ್ಞೆಯನ್ನು ಹೇರಬೇಕು. ರೋಹಿಣಿ ಸಿಂಧೂರಿಯವರ ಮಾನಹಾನಿ ಮಾಡುವ ಫೋಟೋಗಳು, ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾಗಳಿಂದ ತೆಗೆಯುವಂತೆ ರೂಪಾ ಅವರಿಗೆ ಸೂಚಿಸಿದ್ದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ನೋಟಿಸ್ ನಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೂಪಾಗೆ ಹಿರಿಯ ವಕೀಲರ ಮೂಲಕ ನೋಟಿಸ್ ನೀಡಲಾಗಿದೆ.
ರೂಪಾ ವಿರುದ್ಧ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೂಡ ದೂರು ನೀಡಿದ್ದರೂ, ಚೌಕಟ್ಟು ಮೀರಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ವಾದವನ್ನು ಆಲಿಸಿದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ.