ಬಳ್ಳಾರಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಗಣಿನಾಡು ಬಳ್ಳಾರಿಗೆ ಆಗಮಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರಿನ ಎಸ್‌ಆರ್‌ಎಸ್ ಶಾಲಾ ಮೈದಾನದಲ್ಲಿ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆ ಆಯೋಜನೆಗೊಂಡಿದ್ದು, ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇಂದು ಬೆಳಗ್ಗೆ 10 ಗಂಟೆಗೆ ದೆಹಲಿ ನಿವಾಸದಿಂದ ರಸ್ತೆ ಮೂಲಕ ಏರ್ ಪೋರ್ಟ್‍ಗೆ ಪ್ರಯಾಣಿಸಲಿರುವ ಅಮಿತ್ ಶಾ 10:15ಕ್ಕೆ ವಾಯುಪಡೆಯ ವಿಶೇಷ ವಿಮಾನದ ಮೂಲಕ ರಾಜ್ಯಕ್ಕೆ ಆಗಮಿಸಲಿದ್ದಾರೆ. 12:50ಕ್ಕೆ ಹುಬ್ಬಳ್ಳಿ ಏರ್ ಪೋರ್ಟ್ ತಲುಪಲಿದ್ದು, 12:55ಕ್ಕೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಸಂಡೂರಿಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1:25ಕ್ಕೆ ಸಂಡೂರಿಗೆ ಬರುವ ಅಮಿತ್ ಶಾ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮ ಮುಗಿಸಿ ಬಳ್ಳಾರಿ ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೋರ್ ಕಮಿಟಿಯ ನಾಯಕರ ಜೊತೆ ಮಧ್ಯಾಹ್ನ 2:30ಕ್ಕೆ ಶಿವಪುರ ಪ್ಯಾಲೇಸ್ ನಲ್ಲಿ ಸಭೆ ನಡೆಸಲಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ ಸಭೆಯ ನಂತರ ಅಮಿತ್ ಶಾ ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದು, ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ರಾಜ್ಯದ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಪಕ್ಷ ಸಂಘಟನೆ ಹಾಗೂ ಚುನಾವಣಾ ಗೆಲುವಿಗೆ ಬೇಕಾದ ತಂತ್ರಗಳ ಬಗ್ಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಲಿದ್ದಾರೆ.










