ಕೋವಿಡ್ ಲಾಕ್ ಡೌನ್ : 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿಎಸ್ ವೈ.

138
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ರಾಜ್ಯಸರ್ಕಾರ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಯಡಿಯೂರಪ್ಪನವರು, 1,250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಸಹಾಯಧನ, ಹಣ್ಣು, ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ 10 ಸಾವಿರ, ಸಹಾಯಧನ, ನೋಂದಣಿ ಮಾಡಿಸಿದ ಆಟೋ ಚಾಲಕರಿಗೆ ಆಟೋ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತಲಾ 3 ಸಾವಿರ ರೂಪಾಯಿ, ಕಟ್ಟಡ ಕಾರ್ಮಿಕರಿಗೆ 3 ಸಾವಿರ, ಅಗಸ, ಚಮ್ಮಾರ, ಕಮ್ಮಾರ ಸೇರಿದಂತೆ ಅಸಂಘಟಿತರಿಗೆ 2 ಸಾವಿರ, ರಸ್ತೆಬದಿ ವ್ಯಾಪಾರಿಗಳಿಗೆ 2 ಸಾವಿರ, ಕಲಾವಿದರು, ಕಲಾ ತಂಡಕ್ಕೆ 3 ಸಾವಿರ, ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದ್ದು, ರಾಜ್ಯದ 30 ಲಕ್ಷ ಜನರಿಗೆ ಹೆಚ್ಚುವರಿಯಾಗಿ ಈ ಯೋಜನೆ ನೀಡಲಾಗಿದ್ದು ಇದಕ್ಕಾಗಿ ಸರ್ಕಾರ 180 ಕೋಟಿ ವಿನಿಯೋಗಿಸಲಿದೆ. ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದ್ದು, ಈವರೆಗೆ 2.6 ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಇದಕ್ಕಾಗಿ 956 ಕೋಟಿ ಖರ್ಚು ಮಾಡಲಾಗುತ್ತದೆ. ಪ್ರತಿ ಪಂಚಾಯತಿಗೆ ಕೋವಿಡ್ ನಿರ್ವಹಣೆಗೆ 50 ಸಾವಿರ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಶಿಕ್ಷಕರು, ಸಿಲಿಂಡರ್ ಡಿಲಿವರಿ ಬಾಯ್ಸ್, ಲೈನ್ ಮೆನ್ ಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಲಾಗಿದೆ. ಲಾಕ್ ಡೌನ್ ವಿಸ್ತರಣೆ ಬಗ್ಗೆ 23 ರಂದು ತೀರ್ಮಾನ ಮಾಡ್ತೀವಿ ಎಂದು ಸಿಎಂ ತಿಳಿಸಿದರು.