ಕೋವಿಡ್ ಸಂದರ್ಭದಲ್ಲಿ ಸುಧಾಕರ್ ನೇತೃತ್ವದಲ್ಲಿ 3 ಸಾವಿರ ಕೋಟಿ ರೂ. ಅಕ್ರಮ : ಸಿದ್ದರಾಮಯ್ಯ.

54
firstsuddi

ಬೆಂಗಳೂರು : ಅಲಿಬಾಬಾ ಮತ್ತು 40 ಕಳ್ಳರು ಇದ್ದಾರಲ್ಲ? ಅದರಲ್ಲಿ ಈ ಸುಧಾಕರ್ ಕೂಡ ಒಬ್ಬ. ಕೊರೊನಾ ಸಂದರ್ಭದಲ್ಲಿ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಅದರ ಮಾಸ್ಟರ್ ಡಾ. ಕೆ ಸುಧಾಕರ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಮಾತನಾಡಿದ ಅವರು, ಹೆಚ್.ಕೆ.ಪಾಟೀಲ್ ಅವರ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರೋಗ್ಯ ಇಲಾಖೆಯಲ್ಲಿ ಕೋವಿಡ್ ವೇಳೆ ಲೋಪ ಆಗಿರುವ ಬಗ್ಗೆ ವರದಿ ಕೊಟ್ಟಿದೆ. ಆದರೆ ಸ್ಪೀಕರ್ ಇನ್ನೂ ನಾನು ಆರ್ ಎಸ್ ಎಸ್ ಅಂದ್ಕೊಂಡು ಬಿಟ್ಟಿದ್ದಾರೆ. ಅದಕ್ಕೆ ಹೆಚ್.ಕೆ. ಪಾಟೀಲ್ ಸಮಿತಿ ಕೊಟ್ಟ ವರದಿಯನ್ನು ಸದನದಲ್ಲಿ ಮಂಡನೆ ಮಾಡಿಲ್ಲ, ಇಟ್ಕೊಂಡು ಕುಳಿತಿದ್ದಾರೆ ಎಂದು ಟೀಕಿಸಿದರು.

ನಮ್ಮ ಪಕ್ಷದಿಂದಲೇ 2013ರಲ್ಲಿ ಸುಧಾಕರ್ ಅವರಿಗೆ ಟಿಕೆಟ್ ಕೊಟ್ಟಿದ್ದೆವು ಎಂದ ಸಿದ್ದರಾಮಯ್ಯ, ಈಗ ಸುಧಾಕರ್ ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಹೋಗಿ ಮಂತ್ರಿಯಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಮೂಲಕ ಸುಳ್ಳು ಹೇಳಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ 35 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆಫೀಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪಾಪಾ ಸುಧಾಕರ್ ಎಂಬಿಬಿಎಸ್ ಓದ್ಕೊಂಡಿದ್ದಾರೆ ಅಂದ್ಕೊಂಡಿದ್ದೆ. ಅವರು ಎಜಿ ವರದಿಯನ್ನು ಓದಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಎಜಿ ವರದಿಯಲ್ಲಿ ರಿಕನ್ಸಿಲೇಶನ್ ಇದೆ. ಜಮಾ, ಖರ್ಚು ಸೇರಿಸಿ ಆ ವರದಿಯನ್ನು ಕೊಟ್ಟಿರುತ್ತಾರೆ ಎಂದು ಹೇಳಿದರು.

ತನ್ನ ವಿರುದ್ಧ ಹಾಗೂ ಆಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದರೆ ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಸುಮ್ಮನೆ ಏಕೆ ಇತ್ತು ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ನಾವು ಆಡಳಿತದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರು ಆಗ ಕಡ್ಲೆಪುರಿ ತಿಂತಿದ್ರಾ? ಆಗೇನು ಅವರ ಬಾಯಲ್ಲಿ ಕಡುಬು ಸಿಕ್ಕಿ ಹಾಕಿಕೊಂಡಿತ್ತಾ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ಆದರೆ ಈ ಬಿಜೆಪಿ ಸರ್ಕಾರದವರು ಒಂದು ಪ್ರಕರಣವನ್ನಾದರೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಿದೆಯಾ ಎಂದು ಪ್ರಶ್ನಿಸಿದರು.